ಉದಯವಾಹಿನಿ, ನವದೆಹಲಿ: ಮುಂಬೈನ ಲೋಕಲ್‌ ರೈಲುಗಳಲ್ಲಿ 2006ರ ಜು.11ರಂದು ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಸಂಭವಿಸಿದಂತೆ ಬಾಂಬೆ ಹೈಕೋರ್ಟ್‌, ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಕ ಕಾಯ್ದೆಯಡಿ ಬಾಕಿ ಇರುವ ಹಲವಾರು ವಿಚಾರಣೆಗಳ ಮೇಲೆ ಪರಿಣಾಮ ಬೀರಬಹುದೆಂಬ ಮಹಾರಾಷ್ಟ್ರ ಸರ್ಕಾರದ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು ತಡೆಯಾಜ್ಞೆ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಖುಲಾಸೆಗೊಂಡ ನಂತರ ಈಗಾಗಲೇ ಬಿಡುಗಡೆಯಾಗಿರುವ 12 ಆರೋಪಿಗಳ ಬಿಡುಗಡೆಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿತು. ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಅನಿಲ್‌ ಕಿಲೊರ್‌ ಮತ್ತು ಶ್ಯಾಮ್‌ ಚಾಂದಕ್‌ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕಳೆದ ಜು.21ರಂದು ಆರೋಪಿಗಳನ್ನು ಖುಲಾಸೆಗೊಳಿಸಿ ಪ್ರಾಸಿಕ್ಯೂಷನ್‌ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಆದೇಶ ನೀಡಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲನವಿ ಅರ್ಜಿ ಸಲ್ಲಿಸಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್‌ ಮತ್ತು ಎನ್‌.ಕೋಟೇಶ್ವರ ಸಿಂಗ್‌ ಅವರಿದ್ದ ದ್ವಿಸದಸ್ಯ ಪೀಠ, ಖುಲಾಸೆಗೊಂಡಿದ್ದ 12 ಮಂದಿ ಆರೋಪಿಗಳಿಗೆ ನೋಟಿಸ್‌‍ ನೀಡಿತು.
ಆಕ್ಷೇಪಿಸಲಾದ ತೀರ್ಪನ್ನು ಪೂರ್ವ ನಿದರ್ಶನವೆಂದು ಪರಿಗಣಿಸದಂತೆ ನಾವು ಅಭಿಪ್ರಾಯಪಡುತ್ತೇವೆ. ಆದ್ದರಿಂದ ಆಕ್ಷೇಪಿಸಲಾದ ತೀರ್ಪಿಗೆ ತಡೆ ಹಿಡಿಯಲಾಗುವುದು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ. ಮಹಾರಾಷ್ಟ್ರ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತ, ಪ್ರಕರಣದಲ್ಲಿ ಖುಲಾಸೆಗೊಂಡವರ ಬಿಡುಗಡೆಗೆ ನಾವು ವಿರೋಧಿಸುತ್ತಿಲ್ಲ. ಬದಲಿಗೆ ಪ್ರಸ್ತುತ ವಿಚಾರಣೆಯಲ್ಲಿರುವ ಮೊಕಾ ಪ್ರಕರಣಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮುಂಬೈ ಹೈಕೋರ್ಟ್‌ ನ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!