ಉದಯವಾಹಿನಿ, ನಟ ದರ್ಶನ್ ಅವರಿಗೆ ಢವಢವ ಶುರುವಾಗಿದೆ. ಅವರಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕ ಸರ್ಕಾರ ಪ್ರಶ್ನಿಸಿದೆ. ಇದರ ವಿಚಾರಣೆ ನಡೆದಿದ್ದು, ಹೈಕೋರ್ಟ್ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಹಾಗಾಗಿ ದರ್ಶನ್ ಅವರ ಜಾಮೀನು ರದ್ದಾಗುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗಳ ಕುರಿತಂತೆ ನಟಿ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇಂದಿನ ವಿಚಾರಣೆ ಬಳಿಕ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಭಾರತದ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಒಂದು ಭರವಸೆಯ ಬೆಳಕಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ’ ಎಂದು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಹಾಗೂ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಜಾಮೀನು ನೀಡುವಾಗ ಹೈಕೋರ್ಟ್ ತೆಗೆದುಕೊಂಡ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸದ್ಯ ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರೀಕರಣದ ಸಲುವಾಗಿ ಅವರು ವಿದೇಶಕ್ಕೆ ತೆರಳಿದ್ದಾರೆ. ಒಂದು ವೇಳೆ ಜಾಮೀನು ರದ್ದಾದರೆ ಅವರು ಪುನಃ ಜೈಲುವಾಸ ಅನುಭವಿಸಬೇಕಾಗುತ್ತದೆ. ರೇಣುಕಾಸ್ವಾಮಿ ಹತ್ಯೆಯ ವಿವರಗಳನ್ನು ಕೇಳಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೂ ಅಚ್ಚರಿ ಆಗಿದೆ.ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರ ವಾದವನ್ನು ಸುಪ್ರೀಂ ಕೋರ್ಟ್ ಆಲಿಸಿದೆ.
