ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ’ಶಕ್ತಿ’ ಯೋಜನೆ ಜಾರಿ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಬಸ್‌ಗಳ ಸಾಮರ್ಥ್ಯಕ್ಕೂ ಮೀರಿ ದುಪ್ಟಟ್ಟು ಪ್ರಯಾಣಿಕರು ಹರಿದು ಬರುತ್ತಿರುವುದರಿಂದ ಅಪಾಯದ ಅಂಚಿನಲ್ಲಿ ಚಾಲಕರು ಬಸ್ ಚಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಬಸ್‌ಗಳಿಗೆ 55 ಮಂದಿ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯವಿದೆ. ಬಿಎಂಟಿಸಿ ಬಸ್‌ಗಳಲ್ಲಿ 40 ಮಂದಿ ಪ್ರಯಾಣಿಕರ ಕರೆದೊಯ್ಯುವ ಸಾಮರ್ಥ್ಯವಿದೆ. ಆದರೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ಒಂದು ಬಸ್‌ನಲ್ಲಿ 100ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
ಇದರಿಂದ ಬಸ್‌ಗಳನ್ನು ಚಲಾಯಿಸುವಾಗ ನಿಯಂತ್ರಿಸುವುದು ಭಾರಿ ಕಷ್ಟವಾಗುತ್ತಿದೆ. ಅದರಲ್ಲೂ ಘಟ್ಟ ಪ್ರದೇಶಗಳಲ್ಲಿ ಬಸ್ ಚಲಾಯಿಸುವುದು ತೀವ್ರ ತೊಂದರೆಯಾಗುತ್ತಿದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಹದೇಶ್ವರ ಬೆಟ್ಟ, ನಂಜನಗೂಡು, ಮೈಸೂರು, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ನಂದಿ ಸೇರಿದಂತೆ ನಾನಾ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರಯಾಣಿಕರ ದಂಡು ಹೆಚ್ಚುತ್ತಿದೆ. ವಾರಂತ್ಯದಲ್ಲಿ ನೂರಕ್ಕೂ ಅಧಿಕ ಮಂದಿ ಬಸ್‌ಗಳನ್ನು ಹತ್ತುತ್ತಿದ್ದಾರೆ ಎಂಬ ದೂರುಗಳು ಹಲವಾರು ಕಡೆ ಬಂದಿವೆ. ಕಳೆದೊಂದು ವಾರದಿಂದ ಈ ಘಟನೆಗಳನ್ನು ಗಮನಿಸುತ್ತಿದ್ದೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
