ಉದಯವಾಹಿನಿ, ಪುದುಚೆರಿ: ದಕ್ಷಿಣ ಭಾರತವನ್ನು ಬಿಜೆಪಿ ಮುಕ್ತಗೊಳಿಸಲು ಪುದುಚೇರಿಯಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು, ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಪುದುಚೇರಿ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಮುಖ್ಯಸ್ಥ ವಿ ವೈತಿಲಿಂಗಂ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ ನೆನಪಿಗಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೋಂಡಿದ್ದ ದಿನೇಶ್ ಗುಂಡೂರಾವ್ ಮಾತನಾಡಿದರು. ದಿನೇಶ್ ಗುಂಡೂರಾವ್ ತಮಿಳುನಾಡು ಮತ್ತು ಪುದುಚೇರಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಆಗಿದ್ದಾರೆ.
ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯ ಸೋಲು ದಕ್ಷಿಣ ಭಾರತದ ರಾಜ್ಯಗಳಿಂದ ಪಕ್ಷವನ್ನು ಹೊರಹಾಕಿದೆ. ಪುದುಚೇರಿ ಮಾತ್ರ ಬಿಜೆಪಿ ಆಡಳಿತ ಇರುವ ರಾಜ್ಯವಾಗಿ ಉಳಿದಿದೆ ಎಂದು ಹೇಳಿದರು. ಪಕ್ಷಾತೀತವಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಾಗಿ ಕೆಲಸ ಮಾಡಿದರೆ ಬಿಜೆಪಿಯನ್ನು ಸೋಲಿಸಬಹುದು ಎಂದು ಕರ್ನಾಟಕದ ಉದಾಹರಣೆ ನೀಡಿದರು. “ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಶಕ್ತಿಯಿಂದ ಏನನ್ನೂ ಮಾಡಲಾಗಲಿಲ್ಲ. ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದಿದೆ, ಸಣ್ಣ ತಪ್ಪುಗಳಿಲ್ಲದಿದ್ದರೆ 150 ಸೀಟುಗಳನ್ನು ದಾಟಬಹುದಿತ್ತು ಎಂದು ಹೇಳಿದರು. ಮುಂಬರುವ ಸಂಸತ್ ಚುನಾವಣೆಯು ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಭಾರತವನ್ನು ಬಿಜೆಪಿಯಿಂದ ಉಳಿಸುವ ಮೊದಲ ಹೆಜ್ಜೆಯಾಗಿದೆ ಎಂದು ರಾವ್ ಹೇಳಿದರು.
