ಉದಯವಾಹಿನಿ, ಬೆಂಗಳೂರು: ರಾಜ್ಯಸರ್ಕಾರದ ಅಧಿಕಾರಿಗಳೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದ್ದಾರೆ ಎನ್ನಲಾದ ಬೆಳವಣಿಗೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಆಡಳಿತ ಪಕ್ಷದ ಶಾಸಕರು, ಸಚಿವರೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸುರ್ಜೇವಾಲ ಈಗಾಗಲೇ 4 ಹಂತಗಳಲ್ಲಿ ಕರ್ನಾಟಕಕ್ಕೆ ಬಂದು ಶಾಸಕರು, ಸಚಿವರು ಹಾಗೂ ಪ್ರಮುಖ ನಾಯಕರ ಜೊತೆ ಆಪ್ತ ಸಮಾಲೋಚನೆ ನಡೆಸಿದರು.
ಅವರು ತಂಗಿರುವ ಖಾಸಗಿ ಹೋಟೆಲ್‌ನಲ್ಲಿ ಅಧಿಕಾರಿಗಳ ಸಭೆ ಕೂಡ ನಡೆಸಿದ್ದಾರೆ ಎಂಬ ಆರೋಪ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸುರ್ಜೇವಾಲ ಅವರು ಶಾಸಕರು, ಸಚಿವರ ಜೊತೆ ಚರ್ಚೆ ನಡೆಸುವಾಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಹೊರಗಿಟ್ಟಿದ್ದರು. ಅದರ ಮುಂದುವರೆದ ಭಾಗವಾಗಿ ವಿವಿಧ ಇಲಾಖೆಗಳ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ತಾವು ತಂಗಿದ್ದ ಖಾಸಗಿ ಹೋಟೆಲ್‌ಗೆ ಕರೆಸಿ ಮಾಹಿತಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.ಇದಕ್ಕೆ ಜೆಡಿಎಸ್ ಪಕ್ಷ ಕಟು ಟೀಕೆ ಮಾಡಿದೆ. ಸದಾಕಾಲ ಸ್ವಪಕ್ಷದ ಸಚಿವರು, ಶಾಸಕರ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸುರ್ಜೇವಾಲ ಅವರ ನಡೆಯನ್ನು ಟೀಕಿಸಿದ್ದಾರೆ.
ಪಕ್ಷದ ಉಸ್ತುವಾರಿ ನಾಯಕರಾದ ಸುರ್ಜೇವಾಲ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರ ಜೊತೆ ಸಭೆ ನಡೆಸುವ ಎಲ್ಲಾ ಅಧಿಕಾರವನ್ನು ಹೊಂದಿದ್ದಾರೆ. ಆದರೆ ಅಧಿಕಾರಿಗಳ ಜೊತೆ ಸಭೆ ನಡೆಸಿದರೆ ಅದು ಸಂವಿಧಾನ ವಿರೋಧಿ ನಡವಳಿಕೆ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸುರ್ಜೇವಾಲ ಅವರ ನಡವಳಿಕೆಗೆ ಪಕ್ಷದ ಬಹಳಷ್ಟು ಮಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇಲಾಖಾವಾರು ಮಾಹಿತಿ ಕಲೆ ಹಾಕುವ ಮೂಲಕ ಸುರ್ಜೇವಾಲ ಸೂಪರ್ ಸಿಎಂ ಅಂತೆ ವರ್ತಿಸುತ್ತಿದ್ದಾರೆ ಹಾಗೂ ಹೈಕಮಾಂಡ್‌ಗೆ ಸಚಿವರ ಮೇಲೆ ನಂಬಿಕೆ ಇಲ್ಲ ಎಂಬ ಸಂದೇಶ ರವಾನೆ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಶಾಸಕರು, ಸಚಿವರು ಕಿಡಿಕಾರುತ್ತಿದ್ದಾರೆ.
