ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ವರ್ಷಧಾರೆ ಚುರುಕು ಪಡೆದುಕೊಂಡಿದ್ದು, ಕರಾವಳಿ, ಮಲೆನಾಡು, ಉತ್ತರಕರ್ನಾಟಕದ ಬೀದರ್‌, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆರ್ಭಟಿಸಿದ್ದು, ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ಮನೆಗಳಿಗೆ ಹಾನಿಯಾಗಿದ್ದು, ತೆಂಗು, ಅಡಿಕೆ ಬೆಳೆಗಳಿಗೆ ಹಾನಿಯಾಗಿದೆ. ಮತ್ತೆ ಕೆಲವಡೆ ಗುಡ್ಡಕುಸಿತವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಸೊರಬ ತಾಲೂಕಿನ ಬೆಲವಂತಕೊಪ್ಪದಲ್ಲಿ ರೈತರ ಜಮೀನೊಂದರಲ್ಲಿ ಬೃಹತ್‌ ಗಾತ್ರದ ಮರ ಉರುಳಿಬಿದ್ದಿದೆ. ಅಡಿಕೆ ಸಸಿ, ಟೊಮ್ಯಾಟೊ ಬೆಳೆ ಹಾನಿಯಾಗಿದೆ.ಭಾರೀ ಮಳೆಯಾಗುತ್ತಿರುವುದರಿಂದ ಕರಾವಳಿಯಾದ್ಯಂತ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಬಿರುಗಾಳಿಯೊಂದಿಗೆ ಧಾರಕಾರ ಮಳೆ ಸುರಿಯುತ್ತಿದ್ದು, ಕಾರ್ಕಳ, ಎರ್ಲಪಾಡಿ, ಬೆಳ್ಳಣ್‌ ಗ್ರಾಮಗಳಲ್ಲಿ ಮನೆಗಳಿಗೆ ನೀರು ಇಳಿದು ಭಾಗಶಃ ಹಾನಿಯಾಗಿವೆ.
ಉಡುಪಿ ಜಿಲ್ಲೆಯ ಕಾರ್ಕಳ ಮಾರ್ಗದಿಂದ ಕುದುರೆಮುಖ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ. ಶಿವಮೊಗ್ಗದಲ್ಲಿ ಮಳೆಯ ಆರ್ಭಟಕ್ಕೆ 7 ಮನೆಗಳಿಗೆ ಹಾನಿಯಾಗಿದೆ. ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕಿನಲ್ಲಿ ಮಳೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. 30 ಸಾವಿರ ಕ್ಯೂಸೆಕ್‌್ಸ ನೀರನ್ನು ಹೊರಬಿಡಲಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲೂ ಸಹ ಮಳೆಯಾಗುತ್ತಿದ್ದು, ಶೃಂಗೇರಿ, ಎನ್‌.ಆರ್‌.ಪುರ, ಮೂಡಿಗೆರೆ, ಭದ್ರಾವತಿ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.ಉತ್ತರಕರ್ನಾಟಕದ ಬೀದರ್‌, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ರಾಯಚೂರು ತಾಲ್ಲೂಕಿನ ಫತ್ತೇಪುರ ಗ್ರಾಮದ ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಮಾರ್ಗವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.

Leave a Reply

Your email address will not be published. Required fields are marked *

error: Content is protected !!