ಉದಯವಾಹಿನಿ, ಬ್ಯಾಂಕಾಕ್: ಶಿವನ ದೇವಸ್ಥಾನದ ವಿಚಾರದ ಬಗ್ಗೆ ಥಾಯ್ಲೆಂಡ್ ಮತ್ತು ಕಾಂಬೋಡಿಯಾದ ಮಧ್ಯೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿದ್ದು ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.ದಟ್ಟವಾದ ಅರಣ್ಯದಿಂದ ಕೂಡಿದ ಡ್ಯಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ ಕಾಂಬೋಡಿಯನ್ ಡ್ರೋನ್ (Drone) ಪತ್ತೆಯಾಗಿದೆ ಎಂದು ಥಾಯ್ಲೆಂಡ್ ಹೇಳಿತ್ತು. ಇದಾದ ಸ್ವಲ್ಪ ಸಮಯದ ನಂತರ, ನೆಲಬಾಂಬ್ ಸ್ಫೋಟಗೊಂಡು ಐವರು ಥಾಯ್ಲೆಂಡ್ ಸೈನಿಕರು ಗಾಯಗೊಂಡಿದ್ದು ಈಗ ಗಲಾಟೆಗೆ ಮೂಲ ಕಾರಣ. ಈ ನೆಲ ಬಾಂಬ್ ಅನ್ನು ಕಾಂಬೋಡಿಯಾ ಇಟ್ಟಿತ್ತು ಎಂದು ಥಾಯ್ಲೆಂಡ್ ದೂರಿದೆ.
ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಬೆನ್ನಲ್ಲೇ ಎರಡೂ ದೇಶಗಳು ರಾಯಭಾರಿಗಳನ್ನು ಹೊರ ಹಾಕಿವೆ. ನಂತರ ಥಾಯ್ಲೆಂಡ್ ಕಾಂಬೋಡಿಯಾದ ಮೇಲೆ ಡ್ರೋನ್ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಬೋಡಿಯಾದ ಫಿರಂಗಿ ಗುಂಡಿನ ದಾಳಿ ನಡೆಸಿದೆ. ಎರಡು ದೇಶಗಳು ಗಡಿಯನ್ನು ಮುಚ್ಚಿದ್ದು ತನ್ನ ದೇಶದ ಜನರು ಮರಳುವಂತೆ ಸೂಚಿಸಿವೆ.ಕಾಂಬೋಡಿಯಾದ ದಾಳಿಯಿಂದ ಒಂಬತ್ತು ಥಾಯ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಐದು ವರ್ಷದ ಬಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಥಾಯ್ ಅಧಿಕಾರಿಗಳು ಹೇಳಿದಾರೆ. ಇದಕ್ಕೆ ಪ್ರತಿಯಾಗಿ ಥಾಯ್ ಸೈನ್ಯವು ಕಾಂಬೋಡಿಯನ್ ಪಡೆಗಳ ಮೇಲೆ BM-21 ರಾಕೆಟ್‌ಗಳನ್ನು ಹಾರಿಸಿವೆ. ಅಷ್ಟೇ ಅಲ್ಲದೇ ಎಫ್ 16 ಯುದ್ಧ ವಿಮಾನದ ಮೂಲಕ ಏರ್ ಸ್ಟ್ರೈಕ್ ಮಾಡಿದೆ ಎಂದು ವರದಿಯಾಗಿದೆ. ಎರಡೂ ದೇಶಗಳ 800 ಕಿಮೀ ಗಡಿಯಲ್ಲಿ ಕನಿಷ್ಠ ಆರು ಸ್ಥಳಗಳಲ್ಲಿ ಘರ್ಷಣೆಗಳು ನಡೆದಿವೆ.
