ಉದಯವಾಹಿನಿ, ಬೆಂಗಳೂರು: ಉತ್ತರ ಕೊಡದ ಅಧಿಕಾರಿಗಳನ್ನು ಅಮಾನತು ಮಾಡಲು ಸಿಎಂ ಸೂಚನೆ ನೀಡಿದ್ದು, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವ ಜಿ.ಪರಮೇಶ್ವರ್ ಭರವಸೆ ನೀಡಿದರು. ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಜಿ.ಪರಮೇಶ್ವರ್, ವಿಪಕ್ಷ ನಾಯಕರು ಉತ್ತರ ಕಡಿಮೆ‌ ಸಂಖ್ಯೆಯಲ್ಲಿ ಬರುತ್ತಿದೆ. ಇದು ಸರ್ಕಾರಕ್ಕೆ ಮುಜುಗರ ತರುವ ವಿಚಾರವಾಗಿದೆ ಎಂದು ಆಕ್ಷೇಪಿಸಿದ್ದರು. ಸ್ಪೀಕರ್ ಆದ ನೀವು ಕೂಡ ಬೇಸರ ವ್ಯಕ್ತಪಡಿಸಿದ್ದೀರಿ.‌ ಮೂರು ಬಾರಿ ಸರ್ಕಾರಕ್ಕೆ ಹೇಳಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸದನ‌ ಮುಂದೂಡಿದ್ದರು. ಸದನದಲ್ಲಿ ಇಂಥ ಘಟನೆ ಬಹಳ ವಿರಳವಾಗಿದೆ ಎಂದರು.

ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸ್ಪೀಕರ್ ಚೇಂಬರ್​ನಲ್ಲಿ ಅವರ ಜೊತೆ ಸಭೆ ನಡೆಸಿದ್ದಾರೆ. ಸಿಎಂ ಅವರು ಸಿಎಸ್ ಕರೆಸಿ ಈ ಸಂಬಂಧ ಕಾರ್ಯದರ್ಶಿಗೆ ಸೂಚನೆ ನೀಡುವಂತೆ ಸೂಚಿಸಿದ್ದಾರೆ. ಉತ್ತರ ನೀಡದ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು, ಲಿಖಿತ ಉತ್ತರ ನೀಡದ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿದ್ದಾರೆ. ಯಾವ ಇಲಾಖೆ ಕಾರ್ಯದರ್ಶಿಗಳು ಲಿಖಿತ ಉತ್ತರ ಕಡಿಮೆ‌ ಕೊಟ್ಟಿದ್ದಾರೆಯೋ ಅವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸಿಎಂ ಹಾಗೂ ಸರ್ಕಾರದ ಪರವಾಗಿ ಭರವಸೆ ನೀಡುತ್ತೇನೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳಲಿದೆ ಎಂದು ತಿಳಿಸಿದರು.

ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ವಸತಿ ಇಲಾಖೆ, ಕಂದಾಯ ಇಲಾಖೆಯಿಂದ ಉತ್ತರ ಕಡಿಮೆ ಬಂದಿದೆ. ಸಿಎಸ್ ಕೂಡ ಕೈ ಚೆಲ್ಲಿ ಕೂತಿದ್ದಾರೆ. ನಮಗೆ ಪ್ರಶ್ನೆ ಎಷ್ಟು ಬರುತ್ತೆ ಎಂಬುದು ಗೊತ್ತಿಲ್ಲ ಅಂದಿದ್ದಾರೆ.‌ ನಾವು ಸದನಕ್ಕೆ ಬಂದು ಏನು ಕಡೆದೂ ಹಾಕಿಲ್ಲ, ಕಟ್ಟೆನೂ ಹಾಕಿಲ್ಲ. ನಿಮ್ಮ ನಡವಳಿಕೆ ಜನ‌ಮೆಚ್ಚುವ ನಡವಳಿಕೆಯಾಗಿದೆ. ಅದಕ್ಕೆ ನಾವು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಸ್ಪೀಕರ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲ ಐಎಎಸ್ ಅಧಿಕಾರಿಗಳು ಕಚೇರಿಗೆ ಬರುತ್ತಿಲ್ಲ: ಕೆಲ ಐಎಎಸ್ ಅಧಿಕಾರಿಗಳು ಎಂಟು ತಿಂಗಳು ಕಚೇರಿಗೆ ಬಂದಿಲ್ಲ. ನನ್ನ ಬಳಿ ರೆಕಾರ್ಡ್ ಇದೆ. ನಿಮಗೆ ಸಂಬಳ ಕೊಡಲ್ವಾ?. ಐಎಎಸ್ ಅಂದರೆ ಐ ಆಮ್ ಸಾರಿ ಅಂತಾಗಿದೆ‌. ಅತ್ತೆ ಮನೆಗೆ ಬಂದ ಹಾಗೆ ಬಂದು ಹೋದರೆ ಹೇಗೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದರು. ಈ ಸಂಬಂಧ ಸಚಿವರಿಗೂ ಜವಾವ್ದಾರಿ ನಿಗದಿ ಮಾಡಬೇಕು. ಸಚಿವರು ಸರಿ ಇದ್ದರೆ, ಐಎಎಸ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಾರೆ. ಐಎಎಸ್ ಅಧಿಕಾರಿಗಳು ಉತ್ತಮ‌ ಕೆಲಸ ಮಾಡಿದರೆ ಕಿರಿಯ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಾರೆ. ಸಚಿವರಿಗೂ ಈ ಬಗ್ಗೆ ಎಚ್ಚರಿಕೆ ನೀಡಬೇಕು‌ ಎಂದು ಆಗ್ರಹಿಸಿದರು.‌

Leave a Reply

Your email address will not be published. Required fields are marked *

error: Content is protected !!