ಉದಯವಾಹಿನಿ, ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಗೊಳಪಡುವ ನುಗು ವನ್ಯಜೀವಿ ವಲಯದಲ್ಲಿ ಹುಲ್ಲುಗಾವಲು ನಿರ್ಮಾಣಕ್ಕೆ ಮಾನವ ಶ್ರಮ ಬಳಸುವ ಬದಲು ಭಾರಿ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ಅರಣ್ಯ ಪರಿಸರ ವ್ಯವಸ್ಥೆಯನ್ನು ನಾಶ ಮಾಡಲಾಗುತ್ತಿದೆ ಎಂದು ಪರಿಸರವಾದಿ ಜೋಸೆಫ್ ಹೂವರ್ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.
‘ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು ಸಸ್ಯಹಾರಿ ಪ್ರಾಣಿಗಳಾದ ಆನೆಗಳು ಮತ್ತು ಜಿಂಕೆಗಳನ್ನು ವನ್ಯಜೀವಿಗಳ ಆವಾಸಸ್ಥಾನಗಳಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಡಿನೊಳಗಿರುವ ಹುಲ್ಲುಗಾವಲುಗಳನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಅರಣ್ಯದೊಳಗೆ ಒಂದು ಹೆಕ್ಟೇರ್ ಹುಲ್ಲುಗಾವಲು ಅಭಿವೃದ್ಧಿಗೆ ₹ 10,000 ವ್ಯಯಿಸಲಾಗುತ್ತಿದೆ. 100 ಹೆಕ್ಟೇರ್‌ಗೆ ಬರೋಬ್ಬರಿ ₹ 1 ಕೋಟಿ ಖರ್ಚು ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.
‘ನಿಯಮಗಳ ಪ್ರಕಾರ ಹುಲ್ಲುಗಾವಲನ್ನು ಸ್ಥಳೀಯ ಸಮುದಾಯಗಳನ್ನು ಬಳಸಿಕೊಂಡು ಹಸ್ತಚಾಲಿತವಾಗಿ ಅಭಿವೃದ್ಧಿಪಡಿಸಬೇಕು. ಆದರೂ ಹಿರಿಯ ಅಧಿಕಾರಿಗಳು ತ್ವರಿತವಾಗಿ ಹುಲ್ಲುಗಾವಲು ನಿರ್ಮಿಸಲು, ಹಣ ಮಾಡಲು ದೈತ್ಯ ಹಿಟಾಚಿ, ಜೆಸಿಬಿ ಬಳಸುತ್ತಿದ್ದು ವನ್ಯಜೀವಿಗಳ ಆವಾಸಸ್ಥಾನವನ್ನು ಧ್ವಂಸಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಭಾರಿ ಯಂತ್ರಗಳನ್ನು ಬಳಸಿ ಹುಲ್ಲುಗಾವಲು ನಿರ್ಮಾಣ ಮಾಡಿರುವ ಪರಿಣಾಮ ನುಗು ವನ್ಯಜೀವಿ ಅಭಯಾರಣ್ಯದಲ್ಲಿ ದಿಂಡಲ್, ಥರೆಯಂತಹ ಸ್ಥಳೀಯ ಗಿಡಗಳ ಪ್ರಭೇದಗಳನ್ನು ನಾಶವಾಗಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿಯಂತೆ ಹುಲಿ ಮೀಸಲು ಪ್ರದೇಶಗಳಲ್ಲಿ ಭಾರಿ ಯಂತ್ರೋಪಕರಣಗಳ ಬಳಕೆಗೆ ನಿರ್ಬಂಧ ಇದ್ದರೂ ನಿಯಮ ಉಲ್ಲಂಘಿಸಲಾಗಿದೆ’ ಎಂದು ದೂರಿದ್ದಾರೆ.

Leave a Reply

Your email address will not be published. Required fields are marked *

error: Content is protected !!