
ಉದಯವಾಹಿನಿ, ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಲೆ (cockroach) ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದ್ದಲ ಎಬ್ಬಿಸಿದ್ದ ಗ್ರಾಹಕನ ವಿರುದ್ಧವೇ ಇದೀಗ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ದೂರು ದಾಖಲಾಗಿದೆ. ಗುರುವಾರ ಬೆಳಿಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರೊಬ್ಬರು ಪೊಂಗಲ್ ಖರೀದಿಸಿ, ಸೇವಿಸುತ್ತಿರುವಾಗ ಅದರಲ್ಲಿ ಜಿರಳೆ ಪತ್ತೆಯಾಗಿತ್ತು. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಮೇಶ್ವರಂ ಕೆಫೆ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗ್ರಾಹಕರು ಆಹಾರ ಮಾಲಿನ್ಯದ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಿದ್ದು, ಈ ಮೂಲಕ ಬ್ರ್ಯಾಂಡ್ ಹೆಸರಿಗೆ ಹಾನಿ ಮಾಡಲು ಹೊರಟಿದ್ದಾರೆ. ಜೊತೆಗೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ಸಂಬಂಧ ಗ್ರಾಹಕರ ವಿರುದ್ಧ ದೂರು ದಾಖಲಾಗಿದೆ.ಭಾರತದ ಅತ್ಯಂತ ಜನಪ್ರಿಯ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಬ್ರ್ಯಾಂಡ್‌ಗಳಲ್ಲಿ ಒಂದಾದ ರಾಮೇಶ್ವರಂ ಕೆಫೆಯ ಬೆಂಗಳೂರು ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ ಆಹಾರ ಮಾಲಿನ್ಯದ ಸುಳ್ಳು ಘಟನೆಯನ್ನು ಪ್ರದರ್ಶಿಸಲಾಗಿದ್ದು, ಇದರಿಂದ ಬ್ರ‍್ಯಾಂಡ್‌ಗೆ ಹಾನಿಯಾಗಿದೆ. ಜೊತೆಗೆ ಹಣ ಸುಲಿಗೆ ಮಾಡಲು ಯತ್ನಿಸಿದ ವ್ಯಕ್ತಿಗಳ ಗುಂಪಿನ ವಿರುದ್ಧ ಅಧಿಕೃತ ಪೊಲೀಸ್ ದೂರು ದಾಖಲಿಸಿದೆ.ಬ್ರ‍್ಯಾಂಡ್‌ನ ಮುಖ್ಯಸ್ಥರು ನೀಡಿದ ಔಪಚಾರಿಕ ದೂರಿನ ಪ್ರಕಾರ, ಜು.24ರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ, 5-7 ವ್ಯಕ್ತಿಗಳ ಗುಂಪು ಸಾರ್ವಜನಿಕವಾಗಿ ಗೊಂದಲ ಸೃಷ್ಟಿಸಿದ್ದಾರೆ. ನೀಡಿದ ಆಹಾರದಲ್ಲಿ ಜಿರಲೆಯಿದೆ ಎಂದು ತಪ್ಪಾಗಿ ಆರೋಪಿಸಿದ್ದಾರೆ. ಬಳಿಕ ವ್ಯಕ್ತಿಗಳು ನಮಗೆ ಪರಿಹಾರ ನೀಡದಿದ್ದಲ್ಲಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದೆ.
