ಉದಯವಾಹಿನಿ, ಕಲಬುರಗಿ: ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿ, ಮಹಾದಾಸೋಹಿ ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿ ಶುಕ್ರವಾರ ತಡರಾತ್ರಿ ಆಸ್ಪತ್ರೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ತಡರಾತ್ರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ವಾಂತಿ ಹಾಗೂ ನಿಶ್ಯಕ್ತಿ ಆದ ಹಿನ್ನಲೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಪ್ಪಾಜಿ ಆರೋಗ್ಯ ಸ್ಥಿರವಾಗಿದೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆ ಪ್ರಕಟಣೆ ಹೊರಡಿಸಿದೆ.

ಉಸಿರಾಟದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಚೇತರಿಸಿಕೊಳ್ಳುತ್ತಿದ್ದಾರೆ. ಡಾ. ಅಪ್ಪಾಜಿ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ತಂಡವು ಅವರ ಒಟ್ಟಾರೆ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಉಸಿರಾಟದ ಸೋಂಕು ನಿಯಂತ್ರಣದಲ್ಲಿದೆ ಎಂದು ಹೇಳಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ತಿಳಿಸಿದ್ದಾರೆ.

ವದಂತಿಗೆ ಕಿವಿಗೊಡದಂತೆ ಮನವಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರು, ಪೂಜ್ಯ ಡಾ. ಅಪ್ಪಾಜಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದರಿಂದ ಶರಣಬಸವೇಶ್ವರ ಸಂಸ್ಥಾನದ ಭಕ್ತರು ಭಯಭೀತರಾಗಬಾರದು ಮತ್ತು ಡಾ. ಅಪ್ಪಾಜಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹರಡಿರುವ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!