ಉದಯವಾಹಿನಿ, ಸೇಂಟ್‌ ಕಿಟ್ಸ್‌: ವಾರ್ನರ್‌ ಪಾರ್ಕ್‌ನಲ್ಲಿ ನಡೆದಿದ್ದ ಹೈಸ್ಕೋರಿಂಗ್‌ ಪಂದ್ಯದಲ್ಲಿ(AUS vs WI) ಟಿಮ್‌ ಡೇವಿಡ್‌ (Tim David) ಅವರ ಸ್ಪೋಟಕ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ, ಎದುರಾಳಿ ವೆಸ್ಟ್‌ ಇಂಡೀಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೂರು ಪಂದ್ಯಗಳ ಟಿ20ಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ಅಂದ ಹಾಗೆ ಶೇಯ್‌ ಹೋಪ್‌ (Shai Hope) ಅವರ ಶತಕದ ಹೊರತಾಗಿಯೂ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡ ಬೌಲಿಂಗ್‌ ವೈಫಲ್ಯದಿಂದ ಮೂರನೇ ಪಂದ್ಯದಲ್ಲಿ ಸೋಲು ಒಪ್ಪಿಕೊಂಡಿತು. ಅಲ್ಲದೆ ಈ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ವಿಫಲವಾಯಿತು.
ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ನೀಡಿದ್ದ 215 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್‌ ಮಾರ್ಷ್‌ (22) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ (20) ಅವರು ಉತ್ತಮ ಆರಂಭ ಪಡೆದರೂ ಇದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಜಾಶ್‌ ಇಂಗ್ಲಿಸ್‌ (15) ಹಾಗೂ ಕ್ಯಾಮೆರಾನ್‌ ಗ್ರೀನ್‌ (11) ಅವರನ್ನು ರೊಮ್ಯಾರಿಯೊ ಶೆಫರ್ಡ್‌ ಔಟ್‌ ಮಾಡಿ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡಿದರು. ಈ ವೇಳೆ ಆಸ್ಟ್ರೇಲಿಯಾ ತಂಡ 87ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಟಿಮ್‌ ಡೇವಿಡ್‌ ದಾಖಲೆಯ ಶತಕ: ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಟಿಮ್‌ ಡೇವಿಡ್‌ ವೆಸ್ಟ್‌ ಇಂಡೀಸ್‌ ಬೌಲರ್‌ಗಳನ್ನು ಸೆದೆ ಬಡಿದರು. ಸ್ಪೋಟಕ ಬ್ಯಾಟ್‌ ಮಾಡಿದ ಟಿಮ್‌ ಡೇವಿಡ್‌, ಕೇವಲ 37 ಎಸೆತಗಳಲ್ಲಿ ಬರೋಬ್ಬರಿ 11 ಸಿಕ್ಸರ್‌ ಹಾಗೂ 6 ಬೌಂಡರಿಗಳೊ೦ದಿಗೆ ಅಜೇಯ 102 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಅಲ್ಲದೆ ಮಿಚೆಲ್‌ ಒವೆನ್‌ ಅವರ ಜೊತೆ ಐದನೇ ವಿಕೆಟ್‌ಗೆ ಡೇವಿಡ್‌ 128 ರನ್‌ಗಳನ್ನು ಕಲೆ ಹಾಕಿದರು. ಡೇವಿಡ್‌ ಅವರ ಜೊತೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ್ದ ಮಿಚೆಲ್‌ ಒವೆನ್‌ ಕೇವಲ 16 ಎಸೆತಗಳಲ್ಲಿ 36 ರನ್‌ ಸಿಡಿಸಿದರು. ಈ ಇಬ್ಬರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಆಸ್ಟ್ರೇಲಿಯಾ ತಂಡ ಕೇವಲ 16.1 ಓವರ್‌ಗಳಿಗೆ 215 ರನ್‌ ಗಳಿಸಿ ಗೆಲುವಿನ ದಡ ಸೇರಿತು.

Leave a Reply

Your email address will not be published. Required fields are marked *

error: Content is protected !!