ಉದಯವಾಹಿನಿ, ಮ್ಯಾಂಚೆಸ್ಟರ್‌: ಇಂಗ್ಲೆಂಡ್ ವಿರುದ್ದ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫಾರ್ಡ್‌ನಲ್ಲಿ ನಡೆಯುತ್ತಿದೆ. ಪಂದ್ಯದ ಎರಡನೇ ಮತ್ತು ಮೂರನೇ ದಿನದಾಟದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಟೀಮ್ ಇಂಡಿಯಾವನ್ನು 358 ರನ್​ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್‌, ಪ್ರಥಮ ಇನಿಂಗ್ಸ್‌ನಲ್ಲಿ ಈಗಾಗಲೇ 520ಕ್ಕೂ ಅಧಿಕ ರನ್‌ ಗಳಿಸಿದೆ. ಆ ಮೂಲಕ ಬೃಹತ್‌ ಮೊತ್ತದ ಮುನ್ನಡೆಯನ್ನು ಪಡೆದಿದೆ. ಮೂರನೇ ದಿನದಾಟ ಜೋ ರೂಟ್‌ ಹಾಗೂ ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ಈ ಇಬ್ಬರ ಎದುರು ಭಾರತೀಯ ಬೌಲರ್‌ಗಳು ದುಬಾರಿಯಾದರು. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ವಿರುದ್ದ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಕುಲ್ದೀಪ್‌ ಯಾದವ್‌ಗೆ ಸ್ಥಾನ ನೀಡದ ಬಗ್ಗೆ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಗಾಯಾಳು ನಿತೀಶ್‌ ಕುಮಾರ್‌ ರೆಡ್ಡಿ ಬದಲು ನಾಲ್ಕನೇ ಟೆಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡ ಶಾರ್ದುಲ್‌ ಠಾಕುರ್‌ ಬ್ಯಾಟಿಂಗ್‌ನಿಂದ ತಂಡಕ್ಕೆ 40 ರನ್‌ಗಳ ಕೊಡುಗೆ ನೀಡಿದರು. ಆದರೆ, ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದಾರೆ. ಹೀಗಾಗಿ ಶಾರ್ದುಲ್‌ ಠಾಕೂರ್‌ಗೆ ಮಣೆ ಹಾಕಿದ ಆಯ್ಕೆ ಸಮಿತಿ ವಿರುದ್ಧ ಭಾರತ ತಂಡದ ಮಾಜಿ ಆಟಗಾರ ಆರ್‌ ಅಶ್ವಿನ್‌ ಆಕ್ರೋಶ ಹೊರಹಾಕಿದ್ದಾರೆ. ಕುಲ್ದೀಪ್‌ ಯಾದವ್‌ ಅವರನ್ನು ಬೆಂಚ್‌ನಲ್ಲಿ ಕೂರಿಸಿ ಶಾರ್ದುಲ್‌ ಠಾಕೂರ್‌ಗೆ ಸ್ಥಾನ ನೀಡಿದ ಟೀಮ್‌ ಮ್ಯಾನೇಜ್‌ಮೆಂಟ್ ಬಗ್ಗೆ ನನಗೆ ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ.

ನಾಲ್ಕನೇ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿ, ಭಾರತ ತಂಡ ಬ್ಯಾಟಿಂಗ್‌ನಲ್ಲಿ ಸಮಾಧಾನಕರ ರನ್‌ ಕಲೆ ಹಾಕಿದರೂ, ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿ ನಿಯಮಿತವಾಗಿ ವಿಕೆಟ್‌ ಕಬಳಿಸದ ಪರಿಣಾಮ ಹಿನ್ನಡೆ ಅನುಭವಿಸುತ್ತಿದೆ. ಆಂಗ್ಲ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಭಾರತದ ಬೌಲರ್‌ಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗೌತಮ್‌ ಗಂಭೀರ್‌ ವಿರುದ್ಧ ಅಶ್ವಿನ್‌ ಕಿಡಿ: ಆರ್‌ ಅಶ್ವಿನ್‌ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, “ಶಾರ್ದುಲ್‌ ಠಾಕುರ್‌ರವರ ಬ್ಯಾಟಿಂಗ್‌ ಗಮನದಲ್ಲಿಟ್ಟುಕೊಂಡು ತಂಡದಲ್ಲಿ ಸ್ಥಾನ ನೀಡುವುದು ಸರಿಯಲ್ಲ. ಅವರ ಬ್ಯಾಟ್‌ನಿಂದ ನಿರೀಕ್ಷಿತ ರನ್‌ ಬಂದರೂ ಬೌಲಿಂಗ್‌ನಲ್ಲಿ ವಿಫಲರಾಗುತ್ತಿದ್ದಾರೆ. ನನಗೂ ಶಾರ್ದುಲ್‌ ಠಾಕೂರ್‌ ಎಂದರೆ ತುಂಬಾ ಇಷ್ಟ. ಆದರೆ ಈ ಸಮಯದಲ್ಲಿ ಆಯ್ಕೆ ಸಮಿತಿ ಶಾರ್ದುಲ್‌ ಬದಲಿಗೆ ಕುಲ್ದೀಪ್‌ ಯಾದವ್‌ ಅವರನ್ನು ಏಕೆ ಪರಿಗಣಿಸಬಾರದು? ಇದು ನನಗೆ ಅರ್ಥವಾಗುತ್ತಿಲ್ಲ,” ಎಂದು ಕಿಡಿಕಾರಿದ್ದಾರೆ.

“ಭಾರತ ತಂಡಕ್ಕೆ ಖಂಡಿತವಾಗಿಯೂ ಕುಲ್ದೀಪ್‌ರವರ ಅನುಪಸ್ಥಿತಿ ಕಾಡುತ್ತಿದೆ. 2ನೇ ದಿನದಾಟದಲ್ಲಿ ಕುಲ್ದೀಪ್‌ 5 ವಿಕೆಟ್‌ ಪಡೆಯಲಿದ್ದಾರೆಂದು ನಾನು ಹೇಳಲ್ಲ, ಆದರೆ ಅವರು 40 ರನ್‌ ನೀಡಿ ಕನಿಷ್ಠ ಒಂದು ವಿಕೆಟ್‌ ಕಬಳಿಸುವ ಸಾಧ್ಯತೆ ಇತ್ತು ಎನ್ನುವುದು ನನ್ನ ಅಭಿಪ್ರಾಯ. ಆದರೆ ಕುಲ್ದೀಪ್‌ ಆರಂಭಿಕ ಜೋಡಿಯನ್ನಾದರೂ ಮುರಿದಿರುತ್ತಿದ್ದರು. ಭಾರತ ತಂಡ ಎರಡನೇ ದಿನ ಕುಲ್‌ದೀಪ್ ಯಾದವ್‌ನಂತಹ ಆಟಗಾರನನ್ನು ಮಿಸ್‌ ಮಾಡಿಕೊಂಡಿದೆ ಎಂಬುದು ನನ್ನ ಭಾವನೆ,” ಎಂದು ಅಶ್ವಿನ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

“ಯಾರಾದರೂ ನನಗೆ ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಕುಲ್‌ದೀಪ್ ಯಾದವ್‌ನಂತಹ ಆಟಗಾರ ಒಂದೂ ಪಂದ್ಯವಾಡಲ್ಲ ಎಂದು ಹೇಳಿದ್ರೆ, ನಾನು ತುಂಬಾ ಆಶ್ಚರ್ಯಪಡುತ್ತೇನೆ. ಆದರೆ ಬ್ಯಾಟಿಂಗ್‌ ಮೇಲಿನ ಅತಿಯಾದ ನಿರೀಕ್ಷೆ ಮತ್ತು ಆ ಕೊನೆ ದಿನದ 20-30 ರನ್‌ಗಳ ಆಸೆ ಅವರ ಸ್ಥಾನ ಕಸಿದುಕೊಂಡಿದೆ,” ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!