ಉದಯವಾಹಿನಿ, ಇಂಡಿಯಾ ಔಟ್ ಅಭಿಯಾನ ಆರಂಭಿಸಿ ನರೇಂದ್ರ ಮೋದಿ ವಿರುದ್ಧ ಪ್ರಚಾರ ಮಾಡಿದ್ದ ಮಾಲ್ಡೀವ್ಸ್ ಈಗ ರತ್ನಗಂಬಳಿ ಹಾಕಿ ಸ್ವಾಗತಿಸಿದೆ. ಪ್ರಧಾನಿ ಮೋದಿ ಅವರನ್ನು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಮಾಲೆ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ವಿಮಾನ ನಿಲ್ದಾಣದಲ್ಲಿ ಮಕ್ಕಳು ಸಾಂಪ್ರದಾಯಿಕ ನೃತ್ಯದೊಂದಿಗೆ ಮೋದಿ ಅವರನ್ನು ಸ್ವಾಗತಿಸಿದರು. ಕಳೆದ ಮಾಲ್ಡೀವ್ಸ್ ಚುನಾವಣೆಯಲ್ಲಿ ಮುಯಿಜು ಮೋದಿ ಫೋಟೋವನ್ನು ಹಿಡಿದು ಇಂಡಿಯಾ ಔಟ್ ಅಭಿಯಾನವನ್ನು ನಡೆಸಿದ್ದರು. ಆದರೆ ಈಗ ಸೇನಾ ಪ್ರಧಾನ ಕಚೇರಿ ಹೊರಗಡೆ ದೊಡ್ಡ ಕಟೌಟ್ ಹಾಕಿ ಮೋದಿ ಅವರಿಗೆ ಮಾಲ್ಡೀವ್ಸ್ ಗೌರವ ನೀಡಿದೆ. ಜುಲೈ 26 ರಂದು ದ್ವೀಪರಾಷ್ಟ್ರದ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮೋದಿ ಭಾಗವಹಿಸಲಿದ್ದಾರೆ. ಹೀಗಾಗಿ ಅಧ್ಯಕ್ಷ ಮುಯಿಜು ಅವರ ವಿಶೇಷ ಆಹ್ವಾನದ ಮೇರೆಗೆ ಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಮಾಲ್ದೀವ್ಸ್‌ನಲ್ಲಿ ಭಾರತದ ಸಹಾಯದೊಂದಿಗೆ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
