ಉದಯವಾಹಿನಿ, ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತೀಯ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇದರ ವಿರುದ್ದ ಕಾಂಗ್ರೆಸ್ ದೇಶಾದ್ಯಂತ ಅಭಿಯಾನವನ್ನು ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.ಕಳೆದ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂಬ ಲೋಕಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಮತಿ ಸೂಚಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರಗಳಲ್ಲಿ ಮತಕಳವು ಆಗಿರುವುದಕ್ಕೆ ಸಾಕ್ಷಿಗಳಿವೆ. ಕೆಪಿಸಿಸಿ ವತಿಯಿಂದ ನಡೆಸಿರುವ ಸಂಶೋಧನೆಯಿಂದ ಇದು ಸಾಬೀತಾಗಿದೆ. ಸೂಕ್ತ ಸಂದರ್ಭದಲ್ಲಿ ಆಯೋಗಕ್ಕೆ ಈ ಸಾಕ್ಷ್ಯಾಧಾರಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಚುನಾವಣಾ ಆಯೋಗದ ದುರ್ಬಳಕೆ, ಹೊಸದಾಗಿ ಸಮೀಕ್ಷೆ ನಡೆಸಲು ಉದ್ದೇಶಿಸಿರುವ ಜಾತಿಗಣತಿ, ಮುಡಾ ಪ್ರಕರಣ, ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗ ಸೇರಿದಂತೆ ಮತ್ತಿತರ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಬಿಜೆಪಿಯ ದೊಡ್ಡ ಪ್ರಮಾಣದ ಚುನಾವಣಾ ದುರುಪಯೋಗದ ಬಗ್ಗೆ ರಾಹುಲ್ ಗಾಂಧಿ ಅವರ ಆರೋಪಗಳನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರದ ಆಡಳಿತ ಪಕ್ಷವು ಮತದಾರರ ಪಟ್ಟಿಯನ್ನು ದುರ್ಬಳಕೆ ಮಾಡುತ್ತಿದೆ ಮತ್ತು ಭಾರತ ಚುನಾವಣಾ ಆಯೋಗ ಸೇರಿದಂತೆ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
