ಉದಯವಾಹಿನಿ, ಬೆಂಗಳೂರು: ಕೇಂದ್ರ ಚುನಾವಣಾ ಅಯೋಗ ತರಾತುರಿಯಲ್ಲಿ ಲೋಕಸಭಾ ಚುನಾವಣೆಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ದತ್ತಾಂಶಗಳನ್ನು ಅಳಿಸಿಹಾಕಿದ್ದೇಕೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರಶ್ನಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣಾ ಮತಯಂತ್ರಗಳ ಮೇಲೆ ಅನುಮಾನಗಳಿವೆ. ರಾಹುಲ್‌ಗಾಂಧಿ ಅವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಸೂಕ್ತ ಸಂದರ್ಭದಲ್ಲಿ ಅವರು ಅದನ್ನು ಬಹಿರಂಗಪಡಿಸಿದ್ದಾರೆ ಎಂದರು.
ಚುನಾವಣಾ ಆಯೋಗದ ಮೇಲೆ ಪದೇಪದೇ ಉಂಟಾಗುವ ಕೆಲಸಗಳಾಗುತ್ತಿವೆ. ಲೋಕಸಭೆ ಚುನಾವಣೆಗೆ ಸಂಬಂಧ ಪಟ್ಟಂತೆ ಸಿಸಿಟಿವಿ ಕ್ಯಾಮೆರಾ ಹಾಗೂ ಇತರ ದತ್ತಾಂಶಗಳನ್ನು ಆಯೋಗ 45 ದಿನಗಳಲ್ಲೇ ಅಳಿಸಿ ಹಾಕಿದೆ. ಇಷ್ಟು ಆತುರ ಏನಿತ್ತು ಮತ್ತು ಅದರ ಹಿಂದೆ ಯಾರಿದ್ದಾರೆ ಎಂದು ಸ್ವಾಭಾವಿಕ ಪ್ರಶ್ನೆ ಕಾಡುತ್ತಿದೆ ಎಂದರು.ತಾವು ಇತ್ತೀಚೆಗೆ ಅಧಿಕಾರಿಗಳ ನಿಯೋಗದ ಜೊತೆ ದೆಹಲಿಗೆ ಭೇಟಿ ನೀಡಿದ್ದು, ಅಲ್ಲಿ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿದ್ದೇನೆ. ಕೇಂದ್ರದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರಿಗೆ ಬಂದು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಸಮೀಕ್ಷೆ ನಡೆಸಿದರು. ಅದರ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದ್ದೇವೆ.
ನಿರ್ಧಿಷ್ಠ ಸ್ಥಳವನ್ನು ಗುರುತಿಸಿದರೆ, ಮುಖ್ಯಮಂತ್ರಿ ಅವರ ಜೊತೆ ಚರ್ಚೆ ಮಾಡಿ ಮುಂದಿನ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದೇನೆ. ಹಾಗೆಯೇ ಮೈಸೂರು, ವಿಜಯಪುರ, ಶಿವಮೊಗ್ಗ, ಹಾಸನ, ಕಲಬುರಗಿ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.
