ಉದಯವಾಹಿನಿ, ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಏರುಪೇರುಗಳಾಗಿರುವುದು ಕಂಡುಬರುತ್ತಲೇ ಇದೆ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್‌ನ ನಾಯಕರ ಟೀಕೆಗಳಿಗೆ ಸಹಮತ ವ್ಯಕ್ತಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಗರ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಮಾಡಲಾಗಿದೆ. ಮೊದಲಿನಿಂದಲೂ ಇದು ಕಂಡುಬರುತ್ತಲೇ ಇದೆ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳಾಗಿದ್ದವು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಹೇಳಿಕೆ ಸೇರಿದಂತೆ ರಾಹುಲ್‌ಗಾಂಧಿ, ಸಿದ್ದರಾಮಯ್ಯ ಎಲ್ಲಾ ನಾಯಕರೂ ಈಗಾಗಲೇ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ನನ್ನ ಸಹಮತ ಇದೆ. ಅದರ ಹೊರತಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.
ಯಾವ ಪುರುಷಾರ್ಥಕ್ಕೆ ಕೇಂದ್ರ ಸಚಿವ :ಪ್ರಹ್ಲಾದ್ ಜೋಷಿ ಕೇಂದ್ರ ಸರ್ಕಾರದಲ್ಲಿ ಕಳೆದ 10 ವರ್ಷಗಳಿಂದ ಸಚಿವರಾಗಿದ್ದಾರೆ. ಅವರದೇ ಲೋಕಸಭಾ ಕ್ಷೇತ್ರ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಕೊಡಲು ಕಳಸಾಬಂಡೂರಿ ಯೋಜನೆಯನ್ನು ರೂಪಿಸಲಾಗಿದೆ. ನಾನು ಪ್ರಹ್ಲಾದ್ ಜೋಷಿಯವರನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲರಿಗೆ ಬಹಳ ಹತ್ತಿರದವರು. ಜೋಷಿ ಮನಸ್ಸು ಮಾಡಿದರೆ ಕಳಸಾ ಬಂಡೂರಿ ಅಣೆಕಟ್ಟಿಗೆ ಅನುಮತಿ ಕೊಡಿಸುವುದು ದೊಡ್ಡ ವಿಷಯವಲ್ಲ. ಆದರೆ ಜೋಷಿಯವರಿಗೆ ಇದು ಬೇಕಾಗಿಲ್ಲ. ಆದರೂ ಜನ ಜೋಷಿಯವರನ್ನೇ ಗೆಲ್ಲಿಸಿಕೊಳ್ಳುತ್ತಾರೆ. ಇದಕ್ಕೆ ನಾವೇನೂ ಮಾಡಲಾಗುವುದಿಲ್ಲ ಎಂದರು.
