ಉದಯವಾಹಿನಿ, ಕಲಬುರ್ಗಿ: ರಾಜ್ಯದಲ್ಲಿ ಈ ಹಿಂದೆ ಬಳ್ಳಾರಿ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಕಲಬುರ್ಗಿಯಲ್ಲಿ ಮಗು ಜನಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಕಲಬುರ್ಗಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶ್ರೀದೇವಿ (22) ಎನ್ನುವ ಮಹಿಳೆ ಸಾವನಪ್ಪಿದ್ದಾರೆ. ಕಲಬುರ್ಗಿ ಜಿಲ್ಲೆಯ ತಾಲೂಕಿನ ನರಿಬೋಳ ಗ್ರಾಮದ ನಿವಾಸಿಯಾಗಿರುವ ಶ್ರೀದೇವಿ ಅವರು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದಾಳೆ ಎಂದು ಶ್ರೀದೇವಿ ಪೋಷಕರು ಆರೋಪಿಸಿದ್ದಾರೆ.
ಶ್ರೀದೇವಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕೆಲವೇ ಕ್ಷಣಗಳಲ್ಲಿ ರಕ್ತದೊತ್ತಡ ಕಡಿಮೆ ಆಗಿತ್ತು. ವೈದ್ಯರು ಬಂದು ತಪಾಸಣೆ ನಡೆಸಿದ್ದರು. ತಪಾಸಣೆಗೆ ಖಾಸಗಿ ಲ್ಯಾಬ್ ಗೆ ಜಿಮ್ಸ್ ವೈದ್ಯರು ಚೀಟಿ ಬರೆದು ಕೊಟ್ಟಿದ್ದರು. ಈ ವೇಳೆ ಶ್ರೀದೇವಿ ಸಂಬಂಧಿಕರಿಂದ 5600 ಪಡೆದ ಖಾಸಗಿ ಲ್ಯಾಬ್ ಸಿಬ್ಬಂದಿ, ಬಳಿಕ ವೈದ್ಯರು ಮತ್ತೆ 5600 ಪಡೆದಿದ್ದಾರೆ. ಫೋನ್ ಪೇ ಮೂಲಕ ವೈದ್ಯರು ಹಾಗೂ ಖಾಸಗಿ ಲ್ಯಾಬ್ ನವರು ಎರಡು ಬಾರಿ ಹಣ ಪಡೆದಿದ್ದಾರೆ ಕಲಬುರ್ಗಿಯಲ್ಲಿ ದೊಡ್ಡ ಆಸ್ಪತ್ರೆ ಇದ್ದರೂ ರಕ್ತ ತಪಾಸಣೆ ಯಂತ್ರವಿಲ್ಲ. ಪ್ರತಿ ಬಾರಿ ರಕ್ತ ತಪಾಸಣೆಗೆ ವೈದ್ಯರು ಖಾಸಗಿ ಲ್ಯಾಬ್ ಗೆ ಬರೆದುಕೊಡುತ್ತಾರೆ ಎಂದು ಹೇಳಲಾಗಿದೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಶ್ರೀದೇವಿ ಬದುಕುತ್ತಿದ್ದಳು ಎಂದು ಶ್ರೀದೇವಿ ಕುಟುಂಬಸ್ಥರು ಆರೋಪಿಸಿದ್ದಾರೆ.
