ಉದಯವಾಹಿನಿ, ಹಾವೇರಿ: ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರಿಬ್ಬರು ಏಕಾಏಕಿ ಮನೆಯಿಂದ ನಾಪತ್ತೆಯಾದ ಪ್ರಕರಣವು ಜನರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಇದೀಗ ಪೊಲೀಸರು ನಾಪತ್ತೆಯಾಗಿದ್ದ ಅಕ್ಕ ತಂಗಿಯನ್ನು ಪುಣೆಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಹಾವೇರಿಯ ಅಬ್ದುಲ್ ಖಾದರ್ ಲೋಹರ್ ಅವರ ಪುತ್ರಿಯರು ನಾಪತ್ತೆಯಾಗಿದ್ದರು. ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹೋದರಿಯರಿಬ್ಬರು ಓದುತ್ತಿದ್ದರು. ಅವರ ತಾಯಿ ಹೆಚ್ಚು ಮೊಬೈಲ್ ನೋಡಬೇಡಿ ಓದಿಕೊಳ್ಳಿ ಎಂದು ಹೇಳಿದ್ದಕ್ಕಾಗಿ ಸಹೋದರಿಯರು ಮನೆಯಿಂದ ಹೊರಟು ಹೋಗಿದ್ದರು. ಇದೀಗ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.
ತಮ್ಮ ಸಹಪಾಠಿಗಳೊಂದಿಗೆ “ನಾವು ಹುಬ್ಬಳ್ಳಿಗೆ ಹೋಗುತ್ತೇವೆ” ಎಂದು ಹೇಳಿ, ಕೇವಲ ಒಂದೆರಡು ಬಟ್ಟೆಗಳನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಮನೆಯಿಂದ ಹೊರಟಿದ್ದರು. ಆದರೆ, ಅವರು ಹಾವೇರಿಯಿಂದ ದಾದರ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಪುಣೆಗೆ ಪ್ರಯಾಣಿಸಿದ್ದರು. ಬಾಲಕಿಯರ ನಾಪತ್ತೆಯ ವಿಷಯ ತಿಳಿದ ತಕ್ಷಣ, ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು, ಮತ್ತು ಬಾಲಕಿಯರ ಶಾಲಾ ಸಹಪಾಠಿಗಳು ಹಾಗೂ ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಲಾಯಿತು. ಹಾವೇರಿಯ ಪ್ರಮುಖ ಬೀದಿಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ತನಿಖೆ ನಡೆಸಿದ್ದರು.
