ಉದಯವಾಹಿನಿ, ಅಹಮದಾಬಾದ್‌: ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ತಂಡದ ನಾಯಕ ಏಡೆನ್‌ ಮಾರ್ಕ್ರಮ್‌, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ ಮೊದಲು ಬ್ಯಾಟ್‌ ಮಾಡಲಿದೆ. ಗಾಯಕ್ಕೆ ತುತ್ತಾಗಿರುವ ಉಪ ನಾಯಕ ಶುಭಮನ್‌ ಗಿಲ್‌ , ಐದನೇ ಪಂದ್ಯದಿಂದ ಹೊರ ಬಿದ್ದಿದ್ದು, ಇವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌ ಆಡುತ್ತಿದ್ದಾರೆ.
ಉಭಯ ತಂಡಗಳ ನಡುವಣ ನಾಲ್ಕನೇ ಟಿ20ಐ ಪಂದ್ಯ ಲಖನೌದ ಏಕನಾ ಕ್ರೀಡಾಂಗಣದಲ್ಲಿ ರದ್ದಾಗಿತ್ತು. ಏಕೆಂದರೆ ದಟ್ಟ ಮಂಜು ಇದ್ದ ಕಾರಣ ಪಂದ್ಯವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆ ಮೂಲಕ ಟಾಸ್‌ ಕಾಣದೆ ನಾಲ್ಕನೇ ಪಂದ್ಯ ರದ್ದು ಮಾಡಲಾಗಿತ್ತು. ಇದೀಗ ಐದನೇ ಪಂದ್ಯಕ್ಕೂ ಮುನ್ನ ಭಾರತ ತಂಡ ಟಿ20ಐ ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದೆ. ಇದೀಗ ಅಹಮಾದಾಬಾದ್‌ನಲ್ಲಿ ಗೆದ್ದರೆ, ಟೀಮ್‌ ಇಂಡಿಯಾ ಟಿ20ಐ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.

ಅಂದ ಹಾಗೆ ಈ ಪಂದ್ಯದಲ್ಲಿ ಟಾಸ್‌ ಸೋತ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌, ನಾವು ಕೂಡ ಬ್ಯಾಟ್‌ ಮಾಡಬೇಕೆಂದು ಬಯಸಿದ್ದೆವು ಎಂದರು. ಅಲ್ಲದೆ ಈ ಪಂದ್ಯದಲ್ಲಿ ಮೂರು ಬದಲಾವಣೆ ತರಲಾಗಿದೆ ಎಂದು ಹೇಳಿದರು. ಹರ್ಷಿತ್‌ ರಾಣಾ ಸ್ಥಾನಕ್ಕೆ ಜಸ್‌ಪ್ರೀತ್‌ ಬುಮ್ರಾ, ಕುಲ್ದೀಪ್‌ ಯಾದವ್‌ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌ ಹಾಗೂ ಗಾಯಾಳು ಶುಭಮನ್‌ ಗಿಲ್‌ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌ ಪ್ಲೇಯಿಂಗ್‌ xiನಲ್ಲಿ ಆಡುತ್ತಿದ್ದಾರೆಂದು ತಿಳಿಸಿದ್ದಾರೆ.
ಇನ್ನು ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ತಂಡದ ಪ್ಲೇಯಿಂಗ್‌ XIನಲ್ಲಿಒಂದು ಬದಲಾವಣೆ ತರಲಾಗಿದೆ ಎಂದು ನಾಯಕ ಏಡೆನ್‌ ಮಾರ್ಕ್ರಮ್‌ ತಿಳಿಸಿದ್ದಾರೆ. ಹಿರಿಯ ವೇಗದ ಬೌಲರ್‌ ಎನ್ರಿಕ್‌ ನೊರ್ಕಿಯಾ ಅವರ ಸ್ಥಾನಕ್ಕೆ ಜಾರ್ಜ್‌ ಲಿಂಡೆ ಬಂದಿದ್ದಾರೆ. ಇದಿಗ 1-2 ಹಿನ್ನಡೆಯಲ್ಲಿರುವ ಹರಿಣ ಪಡೆಗೆ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಹಾಗಾಗಿ ಈ ಪಂದ್ಯವನ್ನು ಗೆದ್ದು ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿಕೊಳ್ಳಲು ಎದುರು ನೋಡುತ್ತಿದೆ.

Leave a Reply

Your email address will not be published. Required fields are marked *

error: Content is protected !!