ಉದಯವಾಹಿನಿ, ಡಿ.16ರಂದು ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ-ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಬ್ಯಾಟ್ಸ್‌ಮನ್ ಹಾಗೂ ನ್ಯೂಜಿಲೆಂಡ್ ವಿಕೆಟ್ ಕೀಪರ್ ಡೆವೋನ್ ಕಾನ್ವೆ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ 227 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದ್ದಾರೆ. ಆ ಮೂಲಕ ಮಿನಿ ಹರಾಜಿನಲ್ಲಿ ಖರೀದಿಸಲು ಆಸಕ್ತಿ ತೋರದ ಹಾಗೂ ತನ್ನನ್ನು ಉಳಿಸಿಕೊಳ್ಳಲು ನಿರಾಸಕ್ತಿ ತೋರಿದ್ದ ಚೆನ್ನೈ ಫ್ರಾಂಚೈಸಿಗೆ ತಿರುಗೇಟು ನೀಡಿದ್ದಾರೆ. ಕಾನ್ವೇ ಮತ್ತು ಟಾಮ್ ಲೇಥಮ್ ದಾಖಲೆಯ 323 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು, ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ ಮೊದಲನೇ ವಿಕೆಟ್‌ಗೆ ದಾಖಲಾದ ಅತಿ ಹೆಚ್ಚು ಮೊತ್ತ ಇದಾಗಿದೆ. ತಮ್ಮ ಟೆಸ್ಟ್ ವೃತ್ತಿ ಜೀವನದ ಎರಡನೇ ದ್ವಿಶತಕದ ಮೂಲಕ ಕಿವೀಸ್ ಆರಂಭಿಕ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಹತ್ತೊಂಬತ್ತನೇ ಆವೃತ್ತಿಯ ಐಪಿಎಲ್ ಮಿನಿ-ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಒಟ್ಟು 77 ಆಟಗಾರರನ್ನು ಖರೀದಿಸಿದ್ದವು. ಆದರೆ ಡೆವೊನ್ ಕಾನ್ವೆ ಸೇರಿದಂತೆ ವಿಶ್ವದ ಹಲವು ಸ್ಟಾರ್ ಆಟಗಾರರು ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಡೆವೋನ್ ಕಾನ್ವೆ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಪ್ರಮುಖ ಆಟಗಾರರಾಗಿದ್ದರು. ಆದರೆ, ಕಳೆದ ಸೀಸನ್‌ನಲ್ಲಿ ನಿರಾಶದಾಯಕ ಪ್ರದರ್ಶನದ ಕಾರಣ ಚೆನ್ನೈ ಫ್ರಾಂಚೈಸಿ ಕಾನ್ವೆ ಅವರನ್ನು ಕೈ ಬಿಟ್ಟಿದೆ ಹಾಗೂ ಮಿನಿ ಹರಾಜಿನಲ್ಲಿ ಖರೀದಿಸಲು ಆಸಕ್ತಿ ತೋರಲಿಲ್ಲ. ಆದರೆ, ಇದೀಗ ಅವರು ತಮ್ಮ ದೇಶಕ್ಕಾಗಿ ಸ್ಮರಣೀಯ ಇನಿಂಗ್ಸ್‌ನೊಂದಿಗೆ ತಮ್ಮ ಫಾರ್ಮ್‌ಗೆ ಮರಳಿದ್ದಾರೆ.
