ಉದಯವಾಹಿನಿ, ನವದೆಹಲಿ: ಕೆಲವು ಸಮಸ್ಯೆಗಳು ಇರುವುದು ಗೊತ್ತಾಗುವುದೇ ಅದು ಉಲ್ಭಣಿಸಿದಾಗ. ಉದಾ, ಖಿನ್ನತೆಯನ್ನೇ (Depression) ಗಮನಿಸಿ. ತಾನು ಆರೋಗ್ಯವಂತ ಎಂಬ ಭಾವಿಸಿದವರಲ್ಲೂ ಮಾನಸಿಕ ತೊಂದರೆಗಳಿದ್ದು, ಅದು ಆ ವ್ಯಕ್ತಿಯ ಅರಿವಿಗೆ ಬಾರದೇ ಹೋಗುವ ಎಲ್ಲಾ ಸಾಧ್ಯತೆ ಗಳೂ ಇವೆಯಲ್ಲವೇ. ಆದರೆ ಆರಂಭಿಕ ಹಂತದಲ್ಲಿ ಇದನ್ನು ಗುರುತಿಸಿ, ಸರಿಯಾದ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾದ ಮಾನಸಿಕ ಸಮಸ್ಯೆಯಿದು. ಅಧ್ಯಯನಗಳ ಪ್ರಕಾರ, 20 ಮಂದಿ ವಯಸ್ಕರಲ್ಲಿ ಒಬ್ಬರಿಗೆ ಖಿನ್ನತೆಯಿದೆ! ಇಷ್ಟೊಂದು ಸರ್ವವ್ಯಾಪಿಯಾಗಿರುವ ಈ ಸಮಸ್ಯೆಯ ಬಗ್ಗೆ ನಮಗೆಷ್ಟು ಗೊತ್ತು?

ಕೊನೆಯಿರದ ಬೇಸರ, ವಿಷಾದ ಮತ್ತು ಅನಾಸಕ್ತಿಯ ಭಾವಗಳನ್ನು ರೋಗಿಯಲ್ಲಿ ಖಿನ್ನತೆಯು ಮೂಡಿಸುತ್ತದೆ. ದಿನದ ಸರಳ ಕೆಲಸಗಳಲ್ಲೂ ಆಸಕ್ತಿ ಇರುವುದಿಲ್ಲ. ಸ್ವರೂಪ ಜ್ಞಾನವಿರದ ವರಂತೆ ಹಲ್ಲುಜ್ಜುವುದು, ಸ್ನಾನ ಮಾಡುವುದಕ್ಕೂ ಉದಾಸೀನತೆ, ಮುಗಿಯದ ಸುಸ್ತು-ಆಯಾಸ, ಎಲ್ಲದಕ್ಕೂ ದಣಿವು, ಸಿಟ್ಟು-ಸಿಡುಕು ಇಂಥವೆಲ್ಲಾ ಅನುಭವಕ್ಕೆ ಬಂದಾಗಲೂ ತಾವು ಖಿನ್ನತೆಗೆ ಒಳಗಾಗಿರ ಬಹುದು ಎಂಬುದು ಆ ವ್ಯಕ್ತಿಗೆ ತಿಳಿದಿರುವುದಿಲ್ಲ. ಮಾತ್ರವಲ್ಲ, ಅವರ ಆಪ್ತರಿಗೂ ಇವರ ವರ್ತನೆಯಲ್ಲಿ ಕಾಣುವ ವೈಪರೀತ್ಯಗಳಿಗೆ ಕಾರಣ ತಿಳಿಯುವುದಿಲ್ಲ.

ಯಾರಿಗೆಲ್ಲಾ ಆಗಬಹುದು?: ಸಾಮಾನ್ಯವಾಗಿ ಹದಿಹರೆಯದವರಿಂದ ಹಿಡಿದು ವೃದ್ಧರವರೆಗೆ ಇದು ಯಾರನ್ನೂ ಕಾಡಬಹುದು. ಆದರೆ ಹಲವು ಸಂದರ್ಭಗಳಲ್ಲಿ ಪುರುಷರಿಗಿಂತ ಮಹಿಳೆ ಯರನ್ನು ಈ ಸಮಸ್ಯೆ ಕಾಡುವುದು ಹೆಚ್ಚು. ಅಂದರೆ ಪ್ರಸವಾನಂತರ ಅಥವಾ ರಜೋನಿವೃತ್ತಿಯ ಬಳಿಕ- ಇಂಥಾ ಸೂಕ್ಷ್ಮ ಸಂದರ್ಭಗಳಲ್ಲಿ ಖಿನ್ನತೆ ಕಾಡಬಹುದು ಎನ್ನುತ್ತಾರೆ ತಜ್ಞರು. ಒಂದಿಷ್ಟು ದಿನ ಇದ್ದು ತನ್ನಷ್ಟಕ್ಕೇ ಹೊರಟುಹೋಗುವ ಸಮಸ್ಯೆಯಲ್ಲವಿದು. ವಾರಗಟ್ಟಲೆ, ತಿಂಗಳುಗಳ ಕಾಲ, ಕೆಲವೊಮ್ಮೆ ವರ್ಷಗಳವರೆಗೂ ಇದು ಕಾಡುತ್ತದೆ. ಹಾಗಾಗಿ ಮಾನಸಿಕ ತಜ್ಞರಲ್ಲಿ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ಅಗತ್ಯ.

Leave a Reply

Your email address will not be published. Required fields are marked *

error: Content is protected !!