ಉದಯವಾಹಿನಿ, ಬೆಂಗಳೂರು: 18ನೇ ಆವೃತ್ತಿ ಐಪಿಎಲ್‌(IPL 2025) ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ(RCB) ನಡೆಸಿದ ಗೆಲುವಿನ ಸಂಭ್ರಮಾಚರಣೆ(Bengaluru Stampede) ವೇಳೆ ಭೀಕರ ಕಾಲ್ತುಳಿತದಲ್ಲಿ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಈಗಾಗಲೇ ನ್ಯಾ.ಮೈಕೆಲ್‌ ಕುನ್ಹಾ ಆಯೋಗದ ವರದಿ ಆಧರಿಸಿ ಕೆಎಸ್‌ಸಿಎ, ಆರ್‌ಸಿಬಿ, ಆರ್‌ಸಿಎಸ್‌ಪಿಎಲ್‌ ಮತ್ತು ಡಿಎನ್‌ಎ ಎಂಟರ್‌ಟೈನ್ಮೆಂಟ್‌ ನೆಟ್‌ವರ್ಕ್ಸ್‌ ಸಂಸ್ಥೆಗಳು ಮತ್ತು ಅವುಗಳ ಆರು ಪದಾಧಿಕಾರಿಗಳು ಹಾಗೂ ಐವರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದರ ಬೆನ್ನಲ್ಲೇ ಇನ್ನು ಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳೇ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

ಕಾಲ್ತುಳಿತ ಸಂಬಂಧ ನ್ಯಾ.ಮೈಕೆಲ್‌ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿದೆ.

ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆ ಹೆಚ್ಚಿನ ಜನರು ಸೇರುವ ಸಮಾರಂಭಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿದೆ. ದೊಡ್ಡ ಸಂಖ್ಯೆಯ ಜನರು ಸೇರಿದರೆ ಅಪಾಯ ಎದುರಾಗಬಹುದು. ಇಂತಹ ಸಮಾರಂಭಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಿಯೇ ಇನ್ನು ಪಂದ್ಯಗಳನ್ನು ನಡೆಸಬೇಕು ಎಂದಿದೆ.

ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ್ನು ಐಪಿಎಲ್ ಸೇರಿ ಮಹತ್ವದ ಪಂದ್ಯಗಳ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಈಗಾಗಲೇ ಮಹಾರಾಜ ಟ್ರೋಫಿಯನ್ನು ಪ್ರೇಕ್ಷಕರಿಲ್ಲದೆ ಆಯೋಜಿಸಲು ಕೆಎಸ್‌ಸಿಎ ನಿರ್ಧರಿಸಿದೆ. ಭವಿಷ್ಯದಲ್ಲಿ ಐಪಿಎಲ್‌ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ.

ಒಂದೊಮ್ಮೆ ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯಗಳು ರದ್ದಾದರೆ ಮುಂದಿನ ಆವೃತ್ತಿಯ ಫೈನಲ್‌ ಪಂದ್ಯದ ಆತಿಥ್ಯ ಕೂಡ ಕೈತಪ್ಪಲಿದೆ. ಹೌದು ಯಾವ ತಂಡ ಐಪಿಎಲ್‌ ಚಾಂಪಿಯನ್‌ ಆಗುತ್ತದ್ದೋ ಅವರ ತವರಿನಲ್ಲಿ ಮುಂದಿನ ಫೈನಲ್‌ ಪಂದ್ಯ ನಡೆಯುವುದು ವಾಡಿಕೆ. ಆದರೆ ಚಿನ್ನಸ್ವಾಮಿಯಲ್ಲಿ ಪಂದ್ಯ ಇಲ್ಲವಾದಲ್ಲಿ ಬೇರೆ ತಾಣಕ್ಕೆ ಫೈನಲ್‌ ಪಂದ್ಯದ ಅವಕಾಶ ಸಿಗಲಿದೆ.

Leave a Reply

Your email address will not be published. Required fields are marked *

error: Content is protected !!