ಉದಯವಾಹಿನಿ, ಹರಿದ್ವಾರ : ಧಾರ್ಮಿಕ ನಗರಿ ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ೭ ಜನರು ಸಾವನ್ನಪ್ಪಿದ್ದು ೨೫ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ. ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಕಾಲ್ತುಳಿತ ಸಂಭವಿಸಿದೆ.ಇದರಿಂದ ಸ್ಥಳದಲ್ಲೇ ೭ ಮಂದಿ ಮೃತಪಟ್ಟಿದ್ದು ೨೫ಕ್ಕೂ ಗಂಭೀರವಾಗಿ ಗಾಯಗೊಂಡಿದ್ಧಾರೆ. ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸ್ಥಳದಲ್ಲಿ ರಕ್ಷಣಾ ಕಾರ್ಯ ಚುರುಕುಗೊಂಡಿದ್ದು ಗಾಯಾಳು ಭಕ್ತರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇನ್ನುಳಿದ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲು ಸಂಘಟಕರು ಮತ್ತು ದೇವಾಲಯದ ಆಡಳಿತ ಮಂಡಳಿ ಮತ್ತು ರಕ್ಷಣಾ ತಂಡಗಳು ನಿರಂತವಾಗಿ ಶ್ರಮಿಸುತ್ತಿವೆ
ಕಾಲ್ತುಳಿತದಿಂದ ೬ ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡ ವಿಷಯವನ್ನು ಗರ್ವಾಲ್ ವಿಭಾಗದ ಆಯುಕ್ತ ವಿನಯ್ ಶಂಕರ್ ಪಾಂಡೆ ದೃಢಪಡಿಸಿದ್ದು ದೇವಸ್ಥಾನಕ್ಕೆ ತೆರಳುವ ವೇಳೆ ಈ ಅನಾಹುತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಪವಿತ್ರ ಹಿಂದೂ ಮಾಸವಾದ ಸಾವನ್‌ನಲ್ಲಿ ದುರಂತ ಸಂಭವಿಸಿದ್ದು, ನಗರದ ಎಲ್ಲಾ ಯಾತ್ರಾ ಸ್ಥಳಗಳಲ್ಲಿ ಭಕ್ತರ ದಟ್ಟಣೆ ಕಂಡುಬಂದಿದೆ. ಈ ಸಮಯದಲ್ಲಿ ಗಂಗಾ ನದಿಯಿಂದ ನೀರು ಸಂಗ್ರಹಿಸಲು ನಗರಕ್ಕೆ ಭೇಟಿ ನೀಡುವ ಶಿವಭಕ್ತ ಕನ್ವಾರಿಯಾಗಳಿಗೆ ಹರಿದ್ವಾರ ಪ್ರಮುಖ ತಾಣವಾಗಿದೆ. ಗಾಯಗೊಂಡ ಭಕ್ತರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಾರಾಂತ್ಯದ ಹಿನ್ನೆಲೆಯಲ್ಲಿ, ಹರಿದ್ವಾರದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಇಲ್ಲಿನ ಶಂಕರ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಯಾವಾಗಲೂ ಜಾತ್ರೆಯ ಸಂದರ್ಭದಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತಿತ್ತು. ಆದರೆ ಅತಿಯಾದ ಜನಸಂದಣಿ ಹಿನ್ನೆಲೆಯಲ್ಲಿ ಭಕ್ತರನ್ನು ಈ ರಸ್ತೆಯ ಮೂಲಕ ಕಳುಹಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!