ಉದಯವಾಹಿನಿ, ಮೈಸೂರು: ʻಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿʼ ಎಂಬ ಹೇಳಿಕೆಗೆ ಸಿಎಂ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾನಯ್ಯ ಸ್ಪಷ್ಟನೆ ನೀಡಿದ್ದಾರೆ. ನಾಲ್ವಡಿ ಅವರ ಕೊಡುಗೆಗಳನ್ನ ಗೌಣ ಮಾಡಬೇಕು ಅಂತ ಹೇಳಿಲ್ಲ. ಮೈಸೂರು ಅಭಿವೃದ್ಧಿಗೆ ನಾಲ್ವಡಿ ಅವರನ್ನ ಬಿಟ್ರೆ ಹೆಚ್ಚು ಅನುದಾನ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ ಅಂತ ಹೇಳಿದ್ದೇನೆ. ನಮ್ಮಪ್ಪ ಮುಖ್ಯಮಂತ್ರಿಯಾದ ಮೇಲೆ ಕೊಟ್ಟಷ್ಟು ಅನುದಾನವನ್ನ ಬೇರೆ ಯಾವ ಮುಖ್ಯಮಂತ್ರಿಗಳೂ ಕೊಟ್ಟಿಲ್ಲ. ಅದನ್ನ ಮಾತ್ರ ನಾನು ಹೇಳಿದ್ದು. ಬಹಿರಂಗವಾಗಿ ಕ್ಷಮೆ ಕೇಳುವುದಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದನ್ನು ದೊಡ್ಡ ವಿಷಯ ಮಾಡುವ ಅವಶ್ಯಕತೆ ಇಲ್ಲ. ಸಣ್ಣ ವಿಚಾರವನ್ನ ತೆಗೆದುಕೊಂಡು ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ಹೇಳಿದ ಹೇಳಿಕೆಯಲ್ಲ. ನಾಲ್ವಡಿಯವರ ಬಗ್ಗೆ ಸಾಕಷ್ಟು ಗೌರವ ಇದೆ. ಅವರ ಆಡಳಿತ ಎಲ್ಲರಿಗೂ ಸ್ಫೂರ್ತಿ. ಒಡೆಯರ್ ಅವರ ಬಗ್ಗೆ ಸಭೆ ಸಮಾರಂಭಗಳಲ್ಲಿ ಗೌರವಯುತವಾಗಿ ಮಾತನಾಡಿದ್ದೇವೆ. ನಾಲ್ವಡಿ ಅವರ ಕೊಡುಗೆಗಳನ್ನು ಗೌಣ ಮಾಡಬೇಕು ಅನ್ನೊ ದೃಷ್ಟಿಯಿಂದ ಮಾತನಾಡಿಲ್ಲ ಎಂದಿದ್ದಾರೆ.
