ಉದಯವಾಹಿನಿ, ನವದೆಹಲಿ: ವಿಪಕ್ಷಗಳ ಪಟ್ಟಿನಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ, ಟ್ರಂಪ್ ಮಧ್ಯಸ್ಥಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸುಮಾರು 16 ಗಂಟೆಗಳ ಈ ಮೆಗಾ ಡಿಬೇಟ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೊದಲು ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ವಿಪಕ್ಷಗಳಿಂದ ಟೀಕೆಯೂ ಕೇಳಿಬಂದಿತು. ಸಂಸತ್‌ನಲ್ಲಿ ಆಡಳಿತ-ವಿಪಕ್ಷಗಳ ನಡುವೆ ಕೋಲಾಹಲವೇ ಎದ್ದಿತ್ತು. ಆಪರೇಷನ್ ಸಿಂಧೂರ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದು, ವಿಪಕ್ಷಗಳಿಗೆ ಉತ್ತರ ಕೊಡುವ ಸಾಧ್ಯತೆಯಿದೆ.
ಆಪರೇಷನ್ ಸಿಂಧೂರ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜೈ ಶಂಕರ್, ಅಮಿತ್ ಶಾ ಸೇರಿದಂತೆ ಹಲವರು ಆಪರೇಷನ್ ಸಿಂಧೂರದ ಬಗ್ಗೆ ವಿವರಣೆ ನೀಡಿದ್ದಾರೆ. ಇಂದು ಪ್ರಧಾನಿ ಮೋದಿ ಈ ಬಗ್ಗೆ ವಿವರ ಕೊಡಲಿದ್ದಾರೆ ಎಂದು ಸಂಸತ್ ಮೂಲಗಳು ತಿಳಿಸಿವೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಚರ್ಚೆ ಶುರುವಾಗಲಿದ್ದು, ಅಮಿತ್ ಶಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ಮಾತನಾಡಲಿದ್ದಾರೆ. ಆ ಬಳಿಕ ಸಂಜೆ 5 ಗಂಟೆಗೆ ಮೋದಿ ಉತ್ತರ ಕೊಡಲಿದ್ದಾರೆ.
ಸಿಂಧೂರ ಸಮರ – ಸದನ ಕೋಲಾಹಲ: ಪಹಲ್ಗಾಮ್ ಮತ್ತು ಆಪರೇಷನ್ ಸಿಂಧೂರ ಚರ್ಚೆಗೆ ನಾಂದಿ ಹಾಡಿದ ರಾಜನಾಥ್ ಸಿಂಗ್ ಸಂಪೂರ್ಣ ಕಾರ್ಯಾಚರಣೆಯ ವಿಚರಣೆ ನೀಡಿದ್ದರು. ಪಹಲ್ಗಾಮ್ ಉಗ್ರದಾಳಿಗೆ ಪ್ರತೀಕಾರವಾಗಿ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡುವುದು ನಮ್ಮ ಉದ್ದೇಶವಾಗಿತ್ತು. ಪಾಕಿಸ್ಥಾನದ 9 ಉಗ್ರ ನೆಲೆಗಳ ಮೇಲೆ ನಿಖರ ದಾಳಿ ಮಾಡಿ, 100ಕ್ಕೂ ಹೆಚ್ಚು ಉಗ್ರರನ್ನು ಕೊಂದಿದ್ದೇವೆ. ಪಾಕಿಸ್ಥಾನದ ದಾಳಿ ವೇಳೆ ಭಾರತದ ಆತ್ಮರಕ್ಷಣೆಯ ಪ್ರತಿದಾಳಿಯಾಗಿತ್ತು. ನಮ್ಮ ದಾಳಿಗೆ ಹೆದರಿದ ಪಾಕಿಸ್ಥಾನ ದಾಳಿಯನ್ನು ನಿಲ್ಲಿಸುವಂತೆ ಗೋಗರೆಯಿತು. ಪರೀಕ್ಷೆಯಲ್ಲಿ ಫಲಿತಾಂಶ ಮುಖ್ಯ, ಪರೀಕ್ಷೆಯ ಸಮಯದಲ್ಲಿ ಪೆನ್ನು ಪೆನ್ಸಿಲ್ ಮುರಿದು ಹೋಯ್ತಾ ಎನ್ನುವುದು ಪ್ರಶ್ನೆಯಲ್ಲ. ಪರೀಕ್ಷೆಯಲ್ಲಿ ಎಷ್ಟು ಮಾರ್ಕ್ಸ್ ಬಂತು ಅನ್ನೋದು ಬಹಳ ಮುಖ್ಯ ಅಂದರು.
