ಉದಯವಾಹಿನಿ, ಶ್ರಾವಣ ಮಾಸದ ಶುಕ್ಲಪಕ್ಷದ 5ನೇ ಇಡೀ ಭಾರತದಾದ್ಯಂತ ನಾನಾ ಕಡೆ ನಾನಾ ರೀತಿಯಲ್ಲಿ ನಾಗರ ಪಂಚಮಿಯ ಮನೆ ಮಾಡಿರುತ್ತದೆ. ಈ ದಿನ ಮನೆಮಂದಿ ಮುಂಜಾನೆ ನಾಗನ ಗುಡಿಗೆ ಹೋಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ, ನಾಗದೇವರ ಕಲ್ಲಿಗೆ ಹಾಲೆರೆಯುತ್ತಾರೆ. ನಾಗಪೂಜೆಯ ದಿನ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಎಂಬ ಒಂಬತ್ತು ನಾಗದೇವತೆಗಳನ್ನು ಆರಾಧಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಆಚರಣೆ ಸಂಭ್ರಮದಿಂದಲೇ ಕೂಡಿರುತ್ತದೆ. ಬೆಳ್ಳಂ ಬೆಳಗ್ಗೆ ಜನ ಹುತ್ತಕ್ಕೆ ತನಿ ಎರೆಯುವ ಮೂಲಕ ಆಚರಣೆ ಮಾಡುತ್ತಾರೆ.
ಹೌದು. ಭಾರತೀಯ ಪುರಾಣಗಳಲ್ಲಿ ನಾಗಗಳಿಗೆ ದೈವಿಕ ಸ್ಥಾನ ಇದೆ. ಬ್ರಹ್ಮನ ಮಗ ಕಶ್ಯಪ ದಕ್ಷ ಪ್ರಜಾಪತಿಯ ಹದಿನಾರು ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದ. ಇವರಲ್ಲಿ ಅದಿತಿಯ ಮಕ್ಕಳು ದೇವತೆಗಳು, ದಿತಿಯ ಮಕ್ಕಳು ದೈತ್ಯರು ಮತ್ತು ಕದ್ರುವಿಗೆ ಜನಿಸಿದ್ದ ಸಾವಿರ ಮಕ್ಕಳು ನಾಗಗಳು. ಹೀಗಾಗಿ ನಾಗಗಳು ದೇವತೆಗಳ ಸಂಬಂಧಿಗಳಾಗಿದ್ದಾರೆ ಎಂದು ಜನರ ನಂಬಿಕೆ. ಪುರಾಣಗಳ ಪ್ರಕಾರ, ನಾಗಕುಲದವರು ಪಾತಾಳ ಲೋಕವನ್ನು ಆಳುತ್ತಿದ್ದರು. ಶೇಷ, ತಕ್ಷಕ, ವಾಸುಕಿ, ಅನಂತ, ಪದ್ಮ, ಕಂಬಲ, ಕಾರ್ಕೋಟ, ಅಶ್ವತ್ಥ, ಧೃತರಾಷ್ಟ್ರ, ಶಂಖಪಾಲ, ಕಾಲಿಯಾ, ಪಿಂಗಳ ಎಂಬ 12 ನಾಗಗಳ ಉಲ್ಲೇಖ ಪುರಾಣಗಳಲ್ಲಿ ಬರುತ್ತದೆ. ಮಹಾಭಾರತದ ಪ್ರಕಾರ ರಾಜ ಪರೀಕ್ಷಿತನನ್ನು ನಾಗರಾಜ ತಕ್ಷಕ ಕಚ್ಚಿ ಕೊಂದಿದ್ದ. ಇದಕ್ಕೆ ಪ್ರತಿಕಾರವಾಗಿ ಪರೀಕ್ಷಿತನ ಮಗ ಜನಮೇಜಯ ಸರ್ಪಗಳ ಸಂತಾನವನ್ನೇ ನಿರ್ಮೂಲ ಮಾಡಲು ಮಹಾ ಸರ್ಪಯಜ್ಞವನ್ನೇ ನಡೆಸಿದ್ದ. ನಾಗಕುಲವೇ ನಾಶವಾಗುತ್ತದೆ ಎನ್ನುವಾಗ ಆಸ್ತಿಕ ಎಂಬ ಋಷಿ ಯಾಗಶಾಲೆಗೆ ಬಂದು ಈ ಯಜ್ಞವನ್ನು ತಡೆದಿದ್ದ. ಆಸ್ತಿಕ ನಾಗಯಜ್ಞ ನಿಲ್ಲಿಸಿದ ದಿನವನ್ನೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.
ಅದಕ್ಕಾಗಿಯೇ ಈ ದಿನ ಭಾರತದಂತಹ ದೇಶದಲ್ಲಿ ಹಳ್ಳಿ ಹಳ್ಳಿಗಳಲ್ಲೂ ನಾಗರ ಕಲ್ಲುಗಳು, ನಾಗದೇವರ ಗುಡಿಗಳು, ಶಿವ ಮತ್ತು ವಿಷ್ಣುವಿನ ದೇವಾಲಗಳಲ್ಲೂ ನಾಗದೇವರಿಗಾಗಿ ಗುಡಿಗಳು ಕಾಣುತ್ತೇವೆ. ಅಲ್ಲದೇ ಕೆಲ ದೇವಾಲಯಗಳಲ್ಲಿ ಕಾಲಸರ್ಪ ಬಾಧೆ, ಸರ್ಪದೋಷ ಪರಿಹಾರಕ್ಕಾಗಿ ಪೂಜಾ ವಿಧಿವಿಧಾನಗಳನ್ನೂ ನೆರವೇರಿಸಲಾಗುತ್ತದೆ. ಕರ್ನಾಟಕದಲ್ಲಿ ನಾಗದೈವಾರಾಧನೆ ಹೆಚ್ಚಾಗಿಯೇ ಇದೆ. ಕರ್ನಾಟಕದಲ್ಲಿ ಅನೇಕ ನಾಗ ದೇವಾಲಯಗಳಿವೆ, ಆದರೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಮುಕ್ತಿನಾಗ ಕ್ಷೇತ್ರಗಳು ಪ್ರಮುಖವಾಗಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸರ್ಪ ದೋಷ ನಿವಾರಣೆಗೆ ಹೆಸರುವಾಸಿಯಾಗಿದೆ ಮತ್ತು ಮುಕ್ತಿನಾಗ ಕ್ಷೇತ್ರವು ನಾಗದೋಷ ಪರಿಹಾರಕ್ಕಾಗಿ ಪ್ರಸಿದ್ಧವಾಗಿದೆ.
