ಉದಯವಾಹಿನಿ, ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ತೆರವು ಕಾರ್ಯಾಚರಣೆ ಆರಂಭವಾಗಿದೆ. ಕಾರ್ಮಿಕರು ಜಲಾಶಯದ ಆಳಕ್ಕೆ ಇಳಿದು, ಜೋತಾಡಿ ಗೇಟ್ ತೆರವು ಮಾಡುತ್ತಿದ್ದಾರೆ. ರಾಜ್ಯದ ಎರಡನೇ ಅತಿದೊಡ್ಡ ಜಲಾಶಯ ಎನ್ನುವ ಖ್ಯಾತಿಯ ತುಂಗಭದ್ರಾ ಜಲಾಶಯದ ಗೇಟ್ ತೆರವು ಕಾರ್ಯ ಹಲವು ದಿನಗಳಿಂದ ನಡೆಯುತ್ತಿದೆ. ಮೂರು ರಾಜ್ಯಗಳ 16 ಲಕ್ಷ ಎಕರೆ ಕೃಷಿ ಜಮೀನಿಗೆ ತುಂಗಭದ್ರಾ ಜಲಾಶಯ ನೀರುಣಿಸುತ್ತಿದೆ. ಕಳೆದ ವರ್ಷ ಜಲಾಶಯ ಭರ್ತಿಯಾದ ವೇಳೆ 19ನೇ ಕ್ರೆಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ಅಣೆಕಟ್ಟೆಯ ಎಲ್ಲಾ 33 ಕ್ರೆಸ್ಟ್‌ಗೇಟ್‌ಗಳನ್ನೂ ಬದಲಿಸಬೇಕೆಂದು ತಜ್ಞರು ವರದಿ ಸಲ್ಲಿಸಿದ್ದರು.
ವರದಿಯಂತೆ ಹಳೆಯ ಗೇಟ್ ಕಳಚಿ ತೆಗೆಯುವ ಮತ್ತು ಹೊಸ ಗೇಟ್ ಅಳವಡಿಸುವ ಕಾರ್ಯ ಆರಂಭವಾಗಿದೆ. 52 ಕೋಟಿ ರೂಪಾಯಿ ವೆಚ್ಚದಲ್ಲಿ ಗೇಟ್ ಬದಲಿಸಿ, ಹೊಸ ಗೇಟ್ ಕೂಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. 73 ವರ್ಷಗಳ ಕಾಲ ಒಂದಿಷ್ಟೂ ಜಗ್ಗದೆ, ಕುಗ್ಗದೆ ನೀರು ಸಂಗ್ರಹಿಸಿ ಲಕ್ಷಾಂತರ ಜನರ ಪಾಲಿಗೆ ವರವಾಗಿದ್ದ ತುಂಗಭದ್ರಾ ಅಣೆಕಟ್ಟೆ ಜಲಾನಯನ ಪ್ರದೇಶ ಹತ್ತು ಬಾರಿ ಬರಗಾಲ ಕಂಡಿದೆ. ಅಲ್ಲದೇ ಈ ವರ್ಷವೂ ಕಾಮಗಾರಿ ಆರಂಭ ಹಿನ್ನೆಲೆ ಒಂದೇ ಬೆಳೆಗೆ ಜಲಾಶಯದಿಂದ ನೀರು ಲಭಿಸಿದೆ. 2024ರ ಆಗಸ್ಟ್ 10 ರಂದು ರಾತ್ರಿ ಜಲಾಶಯ ಪೂರ್ಣ ಭರ್ತಿಯಾಗಿದ್ದ ದಿನವೇ ಚೈನ್‌ಲಿಂಕ್ ತುಂಡಾಗಿತ್ತು. ಚೈನ್ ಲಿಂಕ್ ತುಂಡಾಗಿ 19ನೇ ಕ್ರೆಸ್ಟ್‌ಗೇಟ್ ನೀರಲ್ಲಿ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ತಜ್ಞರ ತಂಡ ಬೀಡುಬಿಟ್ಟು, ಒಂದೇ ವಾರದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಮಾಡಿ ನೀರು ಪೋಲಾಗುವುದನ್ನು ತಡೆದಿದ್ದರು.
