ಉದಯವಾಹಿನಿ, ಮಂಗಳೂರು: ಅನಾಮಿಕ ವ್ಯಕ್ತಿ ಯಾರು ಅಂತ ಇಡೀ ಧರ್ಮಸ್ಥಳದವರಿಗೆ ಈಗ ಗೊತ್ತಾಗಿದೆ. ಆತ ನಟೋರಿಯಸ್ ಕೆಲಸ ಮಾಡಿದ ಕ್ಷೇತ್ರದಿಂದ ಉಚ್ಚಾಟನೆ ಆಗಿದ್ದ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ವಕೀಲ ಕೇಶವ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿ ಪ್ರಕರಣ ಸಂಬಂಧ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಪ್ರತಿದಿನ 30 ಸಾವಿರದಷ್ಟು ಪ್ರವಾಸಿಗರು ಧರ್ಮಸ್ಥಳಕ್ಕೆ ಬರುತ್ತಾರೆ. ಅನೇಕ ಸಮಸ್ಯೆಗಳಿಂದ ಬಂದು ಜೀವನವನ್ನು ಅಂತ್ಯ ಮಾಡುತ್ತಿದ್ದರು. ಪ್ರವಾಸಿಗರು ಮೃತಪಟ್ಟರೆ ಅಂತ್ಯಸಂಸ್ಕಾರ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಅನಾಮಿಕ ವ್ಯಕ್ತಿ ಹೆಣದ ಮೇಲೆ ಇದ್ದ ಚಿನ್ನ, ಹಣ ಕದಿಯುತ್ತಿದ್ದ. ಈ ಕಾರಣಕ್ಕೆ ಆತನನ್ನು 2014ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಬೆಳವಣಿಗೆ ಹಿಂದೆ ಇರುವ ಷಡ್ಯಂತ್ರ ಯಾರದ್ದು ಎಂದು ಗೊತ್ತಿದೆ. ಕ್ಷೇತ್ರದ ಮೇಲೆ ಆರೋಪ ಮಾಡುವವರಿಗೆ ದೇವರು ತಕ್ಕ ಬುದ್ಧಿ ಕೊಡಲಿ ಎಂದರು.
ಅನಾಮಿಕ ವ್ಯಕ್ತಿಯ ಹಿಂದೆ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಈ ವ್ಯಕ್ತಿಯನ್ನು ವಿಚಾರಣೆ ಮಾಡಬೇಕು, ಮಂಪರು ಪರೀಕ್ಷೆ ಮಾಡಬೇಕು. ಆತನ ಹಿನ್ನೆಲೆಯಲ್ಲಿರುವವರ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಅನಾಮಿಕ ಹೇಳಿದ ಹಾಗೆ ಕೊಲೆ, ಅತ್ಯಾಚಾರ, ಅನ್ಯಾಯ ಪ್ರಕರಣ ನಡೆದಿಲ್ಲ. ಉತ್ಖನನ ಸಂದರ್ಭ ಒಂದೆರಡು ಮೃತ ದೇಹ ಸಿಕ್ಕರೂ ಅಚ್ಚರಿಯಿಲ್ಲ. ಎಸ್‌ಐಟಿ (SIT) ಮೂಲಕ ಎಲ್ಲಾ ರೀತಿಯ ಸಮಗ್ರ ತನಿಖೆಯಾಗಲಿ ಎಂದು ತಿಳಿಸಿದರು.
