ಉದಯವಾಹಿನಿ, ಬಾಗಲಕೋಟೆ: ನಮಗೆ ಅರ್ಹತೆ ಇದ್ದರೆ, ಸರದಿ ಬಂದರೆ ಮುಖ್ಯಮಂತ್ರಿ ಆಗುತ್ತೇವೆ. ನಾನು 1980 ರಲ್ಲೇ ಸಿಎಂ ಆಗಬೇಕಿತ್ತು. ಆದರೆ ಸಮಯದಲ್ಲಿ ಸಿಎಂ ಸ್ಥಾನ ಸಿಗಲಿಲ್ಲ. ನಾನು ಸಿಎಂ ಆಗಲು 10 ವರ್ಷ ಕಾದಿದ್ದೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಪಕ್ಷವನ್ನು ಅಧಿಕಾರಕ್ಕೆ ತಂದರೂ ಸಿಎಂ ಅವಕಾಶ ಕೈತಪ್ಪಿತು ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 1979 ರಿಂದ 1995 ರವರೆಗೆ ನಾನೇ ಪಕ್ಷದ ಸಂಘಟನೆ ಮಾಡಿದ್ದೆ. ಆದರೆ ಆಗ ನನ್ನ ಬದಲು ಆರ್ ಗುಂಡೂರಾವ್ ಸಿಎಂ ಆದರು, ನಂತರ ಬಂಗಾರಪ್ಪ ಸಿಎಂ ಆದರು. ಅದಕ್ಕಿಂತ ಮೊದಲು ವೀರೇಂದ್ರ ಪಾಟಿಲ್ ಸಿಎಂ ಆದರು. ಹಾಗಂತ ನನಗೆ ಸಿಗಲಿಲ್ಲ ಎಂದು ನಾನು ಪಶ್ಚಾತ್ತಾಪ ಪಡಲಿಲ್ಲ ಎಂದು ಹೇಳಿದರು.
ನನ್ನಿಂದಲೇ ಪಕ್ಷದ ಅಧಿಕಾರಕ್ಕೆ ಬಂತು ಎಂದು ಹೇಳಲು ಆಗುವುದಿಲ್ಲ. ಎಷ್ಟು ವರ್ಷ ಸಿಎಂ ಆಗಿದ್ದೇವೆ ಎನ್ನುವುದು ಮುಖ್ಯವಲ್ಲ, ಏನು ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು.
ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸುವುದು, ಪೈಪೋಟಿ ಇರುವುದು ಸಾಮಾನ್ಯ. ಕೆಲವರಿಗೆ ಸಿಗುತ್ತದೆ ಕೆಲವರಿಗೆ ಸಿಗುವುದಿಲ್ಲ. ಸಾಯುವವರೆಗೂ ಕೆಲವರಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸಿಗುವುದಿಲ್ಲ. ಆದರೆ ಆಧಿಕಾರವನ್ನು ವಾಮಮಾರ್ಗದ ಮೂಲಕ ಸಾಧಿಸಬಾರದು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.
ಈಗ ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷ ಆಡಳಿತ ಮಾಡುತ್ತೇನೆ ಎನ್ನುತ್ತಾರೆ. ಅವರಿಗೆ ಆ ಆಸೆ ಇದೆ, ಅದರೆ ಬಗ್ಗೆ ತಪ್ಪು ತಿಳಿದುಕೊಳ್ಳಲು ಆಗುವುದಿಲ್ಲ. ಡಿಸಿಎಂ ಆದವರು ಸಿಎಂ ಆಗಬೇಕು ಅಂತ ಆಸೆ ಪಡ್ತಾರೆ. ಆದರೆ ಕೆಲವೊಂದು ಸಾರಿ ಡೆಪ್ಯುಟಿ ಸಿಎಂ ಆದವರು ಡಿಸಿಎಂ ಆಗಿಯೇ ನಿವೃತ್ತಿಯಾಗಬಹುದು. ನನಗೆ ಸಿಗಲಿಲ್ಲ ಅಂತ ಪಶ್ಚಾತ್ತಾಪ ಪಡುವುದು ಬೇಡ ಎಂದು ತಿಳಿಸಿದರು.
