ಉದಯವಾಹಿನಿ, ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗದೇ ಇರಲು ಬಿಜೆಪಿ ಸರ್ಕಾರದ ಆದೇಶವೇ ಕಾರಣ ಎಂದು ಎಂದು ಸಚಿವ ರಾಮಲಿಂಗಾ ರೆಡ್ಡಿ ದೂರಿದ್ದಾರೆ. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಜಾರಿ ಮಾಡಬಹುದು ಅಂತಾ ಆದೇಶದಲ್ಲಿ ಇದೆ. ಬಿಜೆಪಿ (BJP) ಸರ್ಕಾರದ ಆದೇಶದಿಂದ ಹಿಂಬಾಕಿ ತಡವಾಗಿದೆ ಎಂದು ಹೇಳಿದ್ದಾರೆ.
ಪ್ರತಿ 4 ವರ್ಷಗಳಿಗೊಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ನಡೆಯುತ್ತದೆ. ಈ ಹಿಂದೆ 2012-2016ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2012ರಿಂದ ಜಾರಿಗೆ ಬರುವುದಾಗಿ, 2016-2020ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2016ರಿಂದ ಜಾರಿಗೆ ಬರುವಂತೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖವಾಗಿತ್ತು. 2023ರ ಆದೇಶದಲ್ಲಿ 2023ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಎಂದು ಉಲ್ಲೇಖಿಸಿದೆ. ಈ ಆದೇಶದಲ್ಲಿ 2020 ರಿಂದ ಎಂದು ಉಲ್ಲೇಖ ಮಾಡಿಲ್ಲ. ಈ ಆದೇಶದ ಅನ್ವಯ ಮುಂದಿನ 4 ವರ್ಷ ಅಂದರೆ 2027 ರವರೆಗೆ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ. ಆದೇಶದಲ್ಲಿ ಎಲ್ಲಿಯೂ ಸ್ಪಷ್ಟವಾಗಿ 2020 ರಿಂದಲೇ ಜಾರಿಗೆ ಬರುವಂತೆ ಎಂದು ಉಲ್ಲೇಖ ಮಾಡದ ಕಾರಣ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಕಾಂಗ್ರೆಸ್ ಸರ್ಕಾರ ಮುಂದಿಟ್ಟಿದೆ. 2020 ರಿಂದ ಅನ್ವಯವಾಗುವಂತಿದ್ದರೆ ಇದಕ್ಕಾಗಿ ಯಾವುದೇ ಪ್ರತ್ಯೇಕ ನಿಧಿಯನ್ನು ಹಿಂದಿನ ಸರ್ಕಾರ ಹಂಚಿಕೆ ಮಾಡಿಲ್ಲ. ಈ ಹಿಂದಿನ ಸರ್ಕಾರದ ಆದೇಶವನ್ನು ಮಾರ್ಪಾಡಿಸಲು ಸಾಧ್ಯವಿಲ್ಲ. 2023 ರಿಂದ 2027 ರವರೆಗೆ ನಾಲ್ಕು ವರ್ಷಗಳ ಅವಧಿಯವರೆಗೂ ಬಿಜೆಪಿ ಸರ್ಕಾರದ ಆದೇಶ ಅನ್ವಯವಾಗುತ್ತದೆ. ಯಾವುದೇ ನಿಧಿಯನ್ನು ಮೀಸಲಿಡದ ಕಾರಣ 2027 ರಿಂದಲೇ ಮುಂದಿನ ವೇತನ ಪರಿಷ್ಕರಣೆ ಜಾರಿಯಾಗಲು ಸಾಧ್ಯ ಎಂಬ ನಿಲುವಿಗೆ ಸರ್ಕಾರ ಬಲವಾಗಿ ಅಂಟಿಕೊಂಡಿದೆ.
