ಉದಯವಾಹಿನಿ,ಮೈಸೂರು: ನಾಳೆಯಿಂದ ಮೈಸೂರು ನಗರದಲ್ಲಿ ಕಸವಿಂಗಡಣೆಗೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರಲಾಗುತ್ತಿದ್ದೆ. ನಗರದಲ್ಲಿ ವಿಂಗಡಣೆಯಾಗದೇ ಕಸದ ಸಮಸ್ಯೆ ಸೃಷ್ಟಿಯಾಗುವುದನ್ನು ತಪ್ಪಿಸಿ, ಮೈಸೂರನ್ನು ಶೂನ್ಯ ತ್ಯಾಜ್ಯ ನಿರ್ವಹಣೆ ನಗರವಾಗಿ ರೂಪಿಸಲು ಮೈಸೂರು ಮಹಾನಗರ ಪಾಲಿಕೆಯು ನಗರದಲ್ಲಿ ಹಸಿ, ಒಣ ಕಸ ವಿಂಗಡಣೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದೆ. ಒಂದು ವಾರದಲ್ಲಿ 185 ಟನ್ ಹಸಿ ಹಾಗೂ 78 ಟನ್ ಒಣ ಕಸ ವಿಂಗಡಣೆಯಾಗಿದೆ. ಕೆಸರೆ ಘನ ತ್ಯಾಜ್ಯ ವಿಲೇವಾರಿ ಘಟಕ ಬಳಕೆಗೆ ಸಿದ್ಧವಾಗಿದೆ.
ಇಲ್ಲಿಗೂ ವಿಂಗಡಣೆಯಾಗದ ಕಸ ನೀಡಿ, ಅಲ್ಲಿಯೂ ಮತ್ತೊಂದು ವಿಲೇವಾರಿಯಾಗದ ತ್ಯಾಜ್ಯದ ಬೆಟ್ಟ ಸೃಷ್ಟಿಸುವುದು ಬೇಡ ಎಂಬ ಉದ್ದೇಶದಿಂದ ನಾಗರಿಕರಿಂದಲೇ ವಿಂಗಡಣೆಯಾದ ಕಸವನ್ನು ಹೊಸ ಘಟಕಕ್ಕೆ ನೀಡಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಸಿವೇಜ್ ಫಾರಂನಲ್ಲಿ 20 ವರ್ಷದಿಂದ ವಿಲೇವಾರಿಯಾಗದೇ ಆರು ಲಕ್ಷ ಟನ್ ಕಸ ಬೆಟ್ಟವಾಗಿ ಬೆಳೆದು ನಿಂತಿದೆ. ಈ ಸಮಸ್ಯೆ ಬಗೆಹರಿಸಲು 54 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಭವಿಷ್ಯದಲ್ಲಿಈ ರೀತಿ ವ್ಯರ್ಥವಾಗಿ ಸಾರ್ವಜನಿಕರ ಹಣ ಪೋಲಾಗಬಾರದು, ಪಾಲಿಕೆಗೂ ಆರ್ಥಿಕ ಹೊರೆಯಾಗಬಾರದು ಎಂಬ ದೂರದೃಷ್ಟಿಯಿಂದ ಪಾಲಿಕೆ ಈ ಹೊಸ ಕ್ರಮ ಕೈಗೊಂಡಿದೆ.
