ಉದಯವಾಹಿನಿ, ಮುಂಬೈ: ಇತ್ತೀಚೆಗಷ್ಟೇ ಪರಸ್ಪರ ಬೇರ್ಪಡುವ ನಿರ್ಧಾರ ಪ್ರಕಟಿಸಿದ್ದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ಈಗ ಬೇರ್ಪಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಒಂದಾಗುತ್ತೇವೆಂದು ಘೋಷಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಇಬ್ಬರೂ ಮತ್ತೆ ಒಂದಾಗುತ್ತಿದ್ದೇವೆ ಎಂದು ದೃಢಪಡಿಸಿದ್ದಾರೆ. ಇಬ್ಬರ ಫೋಟೋ ಹೊತೆಗೆ ʻಕೆಲವೊಮ್ಮೆ ದೂರವಾಗಿರುವುದು ಹತ್ತಿರವಾಗಿರುವ ಮೌಲ್ಯವನ್ನು ಕಲಿಸುತ್ತದೆ, ನಾವು ಮತ್ತೆ ಒಂದಾಗಲು ತೀರ್ಮಾನಿಸಿದ್ದೇವೆʼ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಸುದ್ದಿ ತಿಳಿದು ಅವರ ಅಭಿಮಾನಿಗಳು ಹರ್ಷದಿಂದಲೇ ಶುಭಹಾರೈಸಿದ್ದಾರೆ.
35 ವರ್ಷ ವಯಸ್ಸಿನ ಸೈನಾ ನೆಹ್ವಾಲ್ ಅವರು, 2018ರಲ್ಲಿ ಬ್ಯಾಡ್ಮಿಂಟನ್ ಆಟಗಾರನಾಗಿದ್ದ ಕಶ್ಯಪ್ ಅವರನ್ನ ವಿವಾಹವಾಗಿದ್ದರು. ಕಳೆದ ಜುಲೈ 14ರಂದು ಈ ಜೋಡಿ 7 ವರ್ಷಗಳ ದಾಂಪತ್ಯ ಮತ್ತು 14 ವರ್ಷಗಳ ಸಂಬಂಧಕ್ಕೆ ಎಳ್ಳುನೀರು ಬಿಡಲು ನಿರ್ಧರಿಸಿತ್ತು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಮಾಹಿತಿ ಹಂಚಿಕೊಂಡಿದ್ದರು. ಆದರೀಗ ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ.
ಸೈನಾ ನೆಹ್ವಾಲ್ ಒಲಿಂಪಿಕ್ಸ್ ಕಂಚಿನ ಪದಕ ಮತ್ತು ವಿಶ್ವದ ನಂ. 1 ಶ್ರೇಯಾಂಕ ಪಡೆದಿದ್ದರೆ ಪರುಪಳ್ಳಿ ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಗೆಳೆಯರಾಗಿದ್ದ ಇವರು 2018 ರಲ್ಲಿ ಮದುವೆಯಾಗಿದ್ದರು. ಕ್ರೀಡೆಯಿಂದ ನಿವೃತ್ತರಾದ ನಂತರ ಕಶ್ಯಪ್ ಈಗ ತರಬೇತಿ ನೀಡುತ್ತಿದ್ದರೆ ಸೈನಾ ನೆಹ್ವಾಲ್ ಇನ್ನೂ ನಿವೃತ್ತಿ ಹೇಳಿಲ್ಲ. 2019ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನೆಹ್ವಾಲ್, ಪಿವಿ ಸಿಂಧು ಅವರನ್ನು ಸೋಲಿಸಿದಾಗ ಮೈದಾನದಲ್ಲಿ ಕಶ್ಯಪ್ ಅವರು ಮಾರ್ಗದರ್ಶನ ನೀಡಿದ್ದರು.
