ಉದಯವಾಹಿನಿ, ಅಮರಾವತಿ: ಆಂಧ್ರಪ್ರದೇಶದ ಮದ್ಯ ಹಗರಣದ ಆರೋಪಿ ವೆಂಕಟೇಶ್ ನಾಯ್ಡು ಕಂತೆ ಕಂತೆ ಹಣದ ಜೊತೆ ಇರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ 35 ಕೋಟಿ ರೂ. ನಗದು ಇರುವುದು ಪತ್ತೆಯಾಗಿದೆ.
ವೆಂಕಟೇಶ್ ನಾಯ್ಡು ಚಂದ್ರಗಿರಿಯ ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅವರ ಆಪ್ತ ಸಹಾಯಕನಾಗಿದ್ದಾನೆ. ಈತ ಮದ್ಯ ಹಗರಣದ ಪ್ರಮುಖ ಆರೋಪಿ ಎಂದು ವಿಶೇಷ ತನಿಖಾ ದಳ (SIT) ಗುರುತಿಸಿದೆ. ಆರೋಪಿ ವಿಡಿಯೋದಲ್ಲಿ ಹಣ ಎಣಿಸುತ್ತಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಂಧ್ರಪ್ರದೇಶದ ರಾಜಕೀಯದಲ್ಲಿ ವಿವಾದ ಭುಗಿಲೆದ್ದಿದೆ.
ಹಗರಣದಿಂದ ಪಡೆದ ಅಕ್ರಮ ಹಣವನ್ನು ಸ್ಥಳಾಂತರಿಸುವಲ್ಲಿ ಮತ್ತು ಮರೆಮಾಚುವಲ್ಲಿ ನಾಯ್ಡು ಮಹತ್ವದ ಪಾತ್ರ ವಹಿಸಿದ್ದಾನೆ. ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ. ಇನ್ನೂ, ತನಿಖಾ ಸಂಸ್ಥೆಗಳು ಹಣವನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಈ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.3,500 ಕೋಟಿ ರೂ. ಹಗರಣ ನಡೆದಿದೆ ಎನ್ನಲಾಗಿದ್ದು, ಎಸ್‌ಐಟಿ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಈ ಪ್ರಕರಣವನ್ನು ತನಿಖೆ ನಡೆಸುತ್ತಿವೆ. ಹಲವಾರು ರಾಜಕೀಯ ನಾಯಕರು ಮತ್ತು ಅಧಿಕಾರಿಗಳನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ.
