ಉದಯವಾಹಿನಿ, ಮಡಿಕೇರಿ: ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಕಾಳಸಂತೆಗೆ ಕೊಂಡೊಯುತ್ತಿದ್ದ ಕಿಡಿಗೇಡಿಗಳನ್ನ ಕೊಡಗು ಕಂದಾಯ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಪೋನ್ನಂಪೇಟೆ ತಾಲ್ಲೂಕಿನ ಗೋಣಿಕೋಪ್ಪ ಗ್ರಾಮದಲ್ಲಿ ಸುಮಾರು 8 ಕ್ವಿಂಟಲ್ ರೇಷನ್ ಅಕ್ಕಿಯನ್ನ ಕಂದಾಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೌದು. ರಾಜ್ಯ ಸರ್ಕಾರ ಬಡವರಿಗಾಗಿ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿ ಕಾಳಸಂತೆಗೆ ಸೇರುತ್ತಿದೆ. ಬಡವರಿಗೆ ಹಣದ ಆಮಿಷವೊಡ್ಡಿ ಕಡಿಮೆ ಬೆಲೆಗೆ ಅನ್ನಭಾಗ್ಯ ಅಕ್ಕಿ ಖರೀದಿಸುತ್ತಿರುವ ಇಡಿಗೇಡಿಗಳು ಬಳಿಕ ಪಾಲಿಶ್ ಕೊಟ್ಟು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಅದರಂತೆ ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
ಕಳೆದ 4-5 ದಿನಗಳ ಹಿಂದೆ ಕೊಡಗಿನ ಕುಶಾಲನಗರದಲ್ಲಿ ಕ್ವಿಟಲ್ ಗಂಟಲ್ಲೇ ಅಕ್ಕಿಯನ್ನ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಅಕ್ಕಿಯನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ರು. ಈ ಬೆನ್ನಲ್ಲೇ ಇಂದು ಪೋನ್ನಂಪೇಟೆ ತಾಲ್ಲೂಕಿನ ಗೋಣಿಕೋಪ್ಪ ಗ್ರಾಮದಲ್ಲಿ ಕಾಳಸಂತೆಗೆ ಕೊಂಡೊಯ್ಯುತ್ತಿದ್ದ ಸುಮಾರು 8 ಕ್ವಿಂಟಲ್ ರೇಷನ್ ಅಕ್ಕಿಯನ್ನ ಕಂದಾಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ವಿಠಲ ಎಂಬುವವರು ಗೋಣಿಕೋಪ್ಪದಿಂದ ಮೈಸೂರು ಕಡೆಗೆ ವಾಹನದಲ್ಲಿ ಸಾಗಟ ಮಾಡುವ ಸಂದರ್ಭದಲ್ಲಿ ರೆವಿನ್ಯೂ ಇಲಾಖೆಯ ಅಧಿಕಾರಿಗಳು ವಾಹನ ತಡೆದು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಸುಮಾರು 8 ಕ್ವಿಂಟಲ್ ಪಡಿತರ ಅಕ್ಕಿ ಇರುವುದು ಕಂಡು ಬಂದಿದೆ.
