ಉದಯವಾಹಿನಿ, ಬೆಂಗಳೂರು: ಬುಧವಾರ ನಡೆಯಬೇಕಿದ್ದ ಸಾರಿಗೆ ಮುಷ್ಕರವನ್ನು ಮುಂದೂಡುವಂತೆ ಹೈಕೋರ್ಟ್‌ ಸೂಚನೆ ನೀಡಿದೆ.ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ವಕೀಲ ಅಮೃತೇಶ್‌ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಕಲಾಪ ಇಲ್ಲದ ಕಾರಣ ನ್ಯಾ.ಕೆ.ಎಸ್.ಮುದಗಲ್, ನ್ಯಾ.ಎಂ.ಜಿ.ಎಸ್. ಕಮಲ್ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು.
ಅರ್ಜಿದಾರರ ಪರ ಹಾಜರಾಗಿದ್ದ ದೀಕ್ಷಾ ಅಮೃತೇಶ್ ಅವರು, ಜುಲೈ 15ರಂದು ಪ್ರತಿಭಟನಾಕಾರರು ನೋಟಿಸ್‌ ನೀಡಿದ್ದಾರೆ. ಆದರೆ ಈಗ ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿಗೊಳಿಸಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ಸರ್ಕಾರದ ಪರ ಹಾಜರಾದ ವಕೀಲೆ, ನಿಲೋಫರ್‌ ಅಕ್ಬರ್‌, ಸಿಎಂ ಸಿದ್ದರಾಮಯ್ಯನವರು ಸಾರಿಗೆ ನೌಕರರ ಜೊತೆ ಸಭೆ ನಡೆಸುತ್ತಿದ್ದು ಪ್ರಗತಿಯಲ್ಲಿದೆ ಎಂಬ ವಿಚಾರವನ್ನು ಕೋರ್ಟ್‌ ಗಮನಕ್ಕೆ ತಂದರು.

Leave a Reply

Your email address will not be published. Required fields are marked *

error: Content is protected !!