ಉದಯವಾಹಿನಿ, ನವದೆಹಲಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಸಚಿವ ಶಿವನಾಂದ ಪಾಟೀಲ್ ಅವರ ನಡೆಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು, ನಿಮ್ಮ ರಾಜಕೀಯ ಹೋರಾಟಗಳನ್ನ ಕೋರ್ಟ್ ಹೊರಗಿಟ್ಟುಕೊಳ್ಳಿ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಈ ಪ್ರಕರಣ ಸಂಬಂಧ ಸಚಿವ ಶಿವನಾಂದ ಪಾಟೀಲ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯನ್ನ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನಿಂದು ಸಿಜೆಐ ಬಿ.ಆರ್ ಗವಾಯಿ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಈ ವೇಳೆ ನಿಮ್ಮ ರಾಜಕೀಯ ಹೋರಾಟ ಕೋರ್ಟ್ ಹೊರಗೆ ಇಟ್ಟುಕೊಳ್ಳಿ. ಕೋರ್ಟ್‌ಗೆ ರಾಜಕೀಯ ವಿಚಾರ ಯಾಕೆ ತರುತ್ತೀರಿ? ಎಂದು ಚಾಟಿ ಬೀಸಿತು. ಅಲ್ಲದೇ ದಂಡ ಸಹಿತ ಯಾಕೆ ಈ ಅರ್ಜಿಯನ್ನ ವಜಾ ಮಾಡಬಾರದು..? ಅರ್ಜಿದಾರರು ಸಚಿವರಲ್ಲವೇ 1 ಲಕ್ಷ ರೂ. ದಂಡ ಯಾಕೆ ವಿಧಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿತು. ಸಿಜೆಐ ಆಕ್ಷೇಪದ ಬೆನ್ನಲ್ಲೇ ಸಚಿವ ಶಿವಾನಂದ ಪಾಟೀಲ್ ಪರ ವಕೀಲರು ಅರ್ಜಿ ವಾಪಸ್ ಪಡೆದಿದ್ದಾರೆ.
ಇತ್ತೀಚಿನ ಲೋಕಸಭೆ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಯತ್ನಾಳ್ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಶಿವಾನಂದ ಪಾಟೀಲ್ ಅವರು, ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
