ಉದಯವಾಹಿನಿ, ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದ್ದು, ಹಠಾತ್ ಪ್ರವಾಹಕ್ಕೆ ಧರಾಲಿ ಗ್ರಾಮ ಕೊಚ್ಚಿ ಹೋಗಿದೆ.ಖೀರ್ ಗಂಗಾ ರೌದ್ರಾವತಾರಕ್ಕೆ ಇಡೀ ಊರಿಗೇ ಊರೇ ಸರ್ವನಾಶವಾಗಿದ್ದು, 60ಕ್ಕೂ ಹೆಚ್ಚು ಮಂದಿ ಜಲಪ್ರಳಯದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಬೆಟ್ಟದ ಮೇಲಿನಿಂದ ಏಕಾಏಕಿ ನದಿಯಂತೆ ನೀರು ಹರಿದು ಬಂದು ಇಡೀ ಗ್ರಾಮವನ್ನೇ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಲ್ಲಿ ಅನೇಕ ಮನೆಗಳು ಸರ್ವನಾಶವಾಗಿದ್ದು, ವಾಹನಗಳು ಹಾಗೂ ಅಂಗಡಿಗಳು ಸಹ ಧ್ವಂಸವಾಗಿದೆ. ಈ ಭೀಕರ ಪ್ರವಾಹದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎದೆ ಝಲ್ ಎನ್ನಿಸುವಂತಿದೆ. ಏಕಾಏಕಿ ಜಲಪ್ರಳಯ ಉಂಟಾದ ಪರಿಣಾಮ ಜನರು ಕಿರುಚಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
