ಉದಯವಾಹಿನಿ, ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಲಾಲ್ ಕೃಷ್ಣ ಅಡ್ವಾಣಿ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅಮಿತ್ ಶಾ ಅವರು 2019ರ ಮೇ 30ರಿಂದ 2025ರ ಆ.4ರವರೆಗೆ ಒಟ್ಟು 2,258 ದಿನಗಳನ್ನು (6 ವರ್ಷ 65 ದಿನ) ಪೂರೈಸಿದ್ದಾರೆ. ಇದಕ್ಕೂ ಮುನ್ನ ಲಾಲ್ ಕೃಷ್ಣ ಅಡ್ವಾಣಿ ಅವರು 1998ರ ಮಾ.19ರಿಂದ 2004ರ ಮೇ.22ರವರೆಗೆ ಸೇವೆ ಸಲ್ಲಿಸಿ ಒಟ್ಟು 2,256 ದಿನಗಳ (6 ವರ್ಷ 64 ದಿನ) ದಾಖಲೆ ಬರೆದಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಗೃಹ ಸಚಿವರೆಂದು ಅಮಿತ್ ಶಾ ಅವರನ್ನು ಪ್ರಶಂಸಿಸಿದರು.
ಅಮಿತ್ ಶಾ ಅವರು ತಮ್ಮ ಅಧಿಕಾರವಧಿಯಲ್ಲಿ ಹತ್ತಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿ ರದ್ದು: 2019ರ ಆಗಸ್ಟ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದತಿಯ ಮೂಲಕ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಡಿಸಲಾಯಿತು. ಈ ಕ್ರಮವು ದೇಶದ ಏಕೀಕರಣಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಪರಿಗಣಿಸಲಾಗಿದೆ.
ಸಿಎಎ ಮತ್ತು ಎನ್‌ಆರ್‌ಸಿ: ನಾಗರಿಕತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವ ಮೂಲಕ ನೆರೆಯ ರಾಷ್ಟ್ರಗಳಿಂದ ಬಂದಿರುವ ಶರಣಾರ್ಥಿಗಳಿಗೆ ನಾಗರಿಕತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕೂಡ ಚರ್ಚೆಯ ಕೇಂದ್ರವಾಗಿತ್ತು.
