ಉದಯವಾಹಿನಿ,ದಾವಣಗೆರೆ: ಜನರನ್ನು ಮರಳು ಮಾಡಲು ಕಾಂಗ್ರೆಸ್ ದಿನಕ್ಕೊಂದು ನಾಟಕ ಆಡ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಕೇಳಿ ಭರವಸೆ ಕೊಟ್ಟಿದ್ರಾ, ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಅವರೇ ಭರವಸೆ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳ ಅನುಷ್ಠಾನ ಮಾಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡ್ತಿದೆ. ಸಿದ್ದರಾಮಯ್ಯ ಭರವಸೆ ಕೊಟ್ಟಂತೆ 10 ಕೆಜಿ ಅಕ್ಕಿ ಕೊಡಬೇಕು. ಕೊಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ. ಕಾಂಗ್ರೆಸ್ ಸರ್ಕಾರ ಮನೆ ಮನೆಗೆ ಹೋಗಿ 5 ಗ್ಯಾರಂಟಿ ಪತ್ರ ಕೊಟ್ಟು ಬಂದಿದ್ದಾರೆ ಅದರಲ್ಲಿ ಸಿದ್ದರಾಮಯ್ಯ, ಡಿಕೆಶಿ ಸಹಿ ಮಾಡಿದ್ದಾರೆ. ಕಾಂಗ್ರೆಸ್ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಕಿಡಿಕಾರಿದರು.
