ಉದಯವಾಹಿನಿ, ದಾವಣಗೆರೆ: ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವುದು ನ್ಯಾಮತಿ ತಾಲೂಕಿನ ಮಾಚಿಗೊಂಡನಹಳ್ಳಿಯಲ್ಲಿ ನಡೆದಿದೆ.
ಯಶವಂತ್ ನಾಯ್ಕ (24) ನೇಣಿಗೆ ಶರಣಾದ ಯುವಕ. ಈತ ಶಿವಮೊಗ್ಗದ ಫೈನಾನ್ಸ್ ಒಂದರಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದ. ಸಾಲ ಕಟ್ಟಲಿಲ್ಲ ಎಂದರೆ ಮನೆ ಜಪ್ತಿ ಮಾಡುವುದಾಗಿ ಖಾಸಗಿ ಪೈನಾನ್ಸ್ ಸಿಬ್ಬಂದಿ ಬೆದರಿಕೆ ಹಾಕಿದ್ದರು. ಇನ್ನೊಂದು ಕಡೆ ಬೈಕ್ ಅಡವಿಟ್ಟು ಶಿವಮೊಗ್ಗದ ವ್ಯಕ್ತಿಯೊಬ್ಬರ ಬಳಿ 40 ಸಾವಿರ ರೂ. ಸಾಲ ಮಾಡಿದ್ದ. ಸಾಲ ಕಟ್ಟದ ಹಿನ್ನೆಲೆ ಮನೆ ಮುಂದೆ ಬಂದು ಅವರು ಗಲಾಟೆ ಮಾಡಿದ್ದರು. ಇದರ ಜೊತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಸಹ ಕಿರುಕುಳ ನೀಡುತ್ತಿದ್ದರು ಎಂದು ಯುವಕನ ತಾಯಿ ಆರೋಪಿಸಿದ್ದಾರೆ.
ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಮೃತ ಯುವಕನ ತಾಯಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.
