ಉದಯವಾಹಿನಿ, ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕುನ್ನಳ್ಳಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಕಾಫಿತೋಟದಲ್ಲಿ ಕಾಡಾನೆಗಳ ಓಡಾಡಿ ಧ್ವಂಸ ಮಾಡಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಓಡಿಸಲು ಅನುಮತಿ ಇಲ್ಲ ಎಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾಡಾನೆಗಳು ಧರ್ಮಪಾಲ್, ರವೀಂದ್ರ, ಶ್ರೀಕಾಂತ್ ಹಾಗೂ ರವಿ ಎಂಬವರ ಕಾಫಿತೋಟಗಳನ್ನು ಧ್ವಂಸಗೊಳಿಸಿವೆ. ಗ್ರಾಮ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹಿಂದೆ ವ್ಯಕ್ತಿಯೊಬ್ಬರ ಮೇಲೆ ದಾಳಿಯಾಗಿತ್ತು. ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ತೋಟ-ಗ್ರಾಮಗಳಲ್ಲಿ ಕಾಡಾನೆ ಓಡಾಟದಿಂದ ಸ್ಥಳೀಯರು ಅತಂಕಕೊಳಗಾಗಿದ್ದಾರೆ. ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ. ಕಾಡಾನೆ ಸ್ಥಳಾಂತರಿಸಲು ಹಾಗೂ ಓಡಿಸಲು ಅನುಮತಿ ಇಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಎನ್.ಆರ್ ಪುರದಲ್ಲಿ 4 ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!