ಉದಯವಾಹಿನಿ, ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಲಾಯಿಸಿದ ದ್ವಿಚಕ್ರ ವಾಹನದ ಮೇಲಿದ್ದ 19,500 ರೂ. ದಂಡ ಪಾವತಿಸಲಾಗಿದೆ.ಹೆಬ್ಬಾಳ ಫ್ಲೈ ಓವರ್ ಲೂಪ್ ಪರಿಶೀಲನೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಚಲಾಯಿಸಿದ್ದ ದ್ವಿಚಕ್ರ ವಾಹನದ ಮೇಲೆ 19,500 ರೂ.ಗಳ ಸಂಚಾರ ನಿಯಮ ಉಲ್ಲಂಘನೆ ದಂಡವಿರುವುದನ್ನು ಕೆಲವು ಮಾಧ್ಯಮಗಳು ಬಹಿರಂಗಪಡಿಸಿದ್ದವು.
ವಿಷಯ ಬಹಿರಂಗಗೊಳುತ್ತಿದ್ದಂತೆ ದ್ವಿಚಕ್ರ ವಾಹನದ ಮಾಲೀಕ ಠಾಣೆಗೆ ಆಗಮಿಸಿ ಸಂಪೂರ್ಣ ದಂಡ ಪಾವತಿಸಿದ್ದಾರೆ ಎಂದು ಆರ್‌ಟಿ ನಗರ ಸಂಚಾರ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.ಡಿಕೆಶಿ ಚಲಾಯಿಸಿದ್ದ ವಾಹನದ ಮೇಲೆ ಬೆಂಗಳೂರು ಸಂಚಾರ ಪೊಲೀಸ್ ವೆಬ್‌ಸೈಟ್‌ನಲ್ಲಿ 34 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಉಳಿದಿದ್ದವು.ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು, ಸವಾರಿ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಮತ್ತು ಪ್ರವೇಶ ನಿಷೇಧ ಅಥವಾ ಏಕಮುಖ ವಲಯಗಳನ್ನು ಪ್ರವೇಶಿಸುವುದು ಸೇರಿದಂತೆ ಹಲವು ಉಲ್ಲಂಘನೆಗಳು ಸೇರಿದ್ದವು.
