ಉದಯವಾಹಿನಿ, ಮಂಗಳೂರು: ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಉತ್ಖನನ ನಡೆಸುತ್ತಿದ್ದ ಸ್ಥಳದ ಬಳಿ ಖಾಸಗಿ ವಾಹಿನಿಯೊಂದರ ವರದಿಗಾರರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎ್‌ಐಆರ್ ದಾಖಲಾಗಿದೆ. ಗಿರೀಶ್ ಮಟ್ಟಣನವರ್ , ಮಹೇಶ್ ಶೆಟ್ಟಿ ತಿಮರೋಡಿ , ಯೂಟ್ಯೂಬರ್ ಸಮೀರ್ ಹಾಗೂ ಜಯಂತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಖಾಸಗಿ ವಾಹಿನಿಯ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 115(2), 189(2), 191(2), 351(2), 352, 190 ಅಡಿ ಎ್‌ಐಆರ್ ದಾಖಲಾಗಿದೆ. ಎ್‌ಐಆರ್ ನಲ್ಲಿ ಗಿರೀಶ್ ಮಟ್ಟೆಣ್ಣವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ (ಎ2), ಯೂಟ್ಯೂಬರ್ ಸಮೀರ್(ಎ3), ಜಯಂತ್(ಎ4) ಹಾಗೂ ಇತರರು ಎಂದು ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಮತ್ತು ಅವರುಗಳ ಎರಡು ವಾಹನಗಳಿಗೆ ಹಾನಿ ನಡೆಸಿದ ಬಗ್ಗೆ ಹಾಗೂ ಖಾಸಗಿ ನ್ಯೂಸ್ ಚಾನೆಲ್‌ನ ವರದಿಗಾರನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ಆವರಣದಲ್ಲಿ, ಪಾಂಗಾಳದಲ್ಲಿ (ಲಾಠಿ ಚಾರ್ಜ್ ನಡೆದ ಸ್ಥಳದಲ್ಲಿ) ಮತ್ತು ಆಸ್ಪತ್ರೆಯ ಮುಂದೆ ಕಾನೂನುಬಾಹಿರವಾಗಿ ಗುಂಪು ಸೇರಿರುವ ಬಗ್ಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಹಲ್ಲೆಗೊಳಗಾದವರು ಚಿಕಿತ್ಸೆಗಾಗಿ ದಾಖಲಾಗಿರುವ ಆಸ್ಪತ್ರೆಯ ವೈದ್ಯರನ್ನು ವಿಚಾರಿಸಲಾಗಿ, ಪ್ರಾಥಮಿಕ ಆರೋಗ್ಯ ತಪಾಸಣೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿರುವುದು ಕಂಡುಬಂದಿಲ್ಲ ಎಂಬುದಾಗಿ ಮೌಖಿಕವಾಗಿ ತಿಳಿಸಿದ್ದಾರೆ.ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳ್ತಂಗಡಿ ಠಾಣೆ ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?: ಧರ್ಮಸ್ಥಳದ ಸುತ್ತಮುತ್ತ ನಡೆಯುತ್ತಿರುವ ಉಖ್ಖನನದ ವಿಡಿಯೋ ಮಾಡಲು ಬಂದಿದ್ದ ಯೂಟ್ಯೂಬರ್‌ಗಳ ಮೇಲೆ ನಿನ್ನೆ ಸಂಜೆ ಹಲ್ಲೆ ನಡೆದ ವಿಚಾರ ತಿಳಿದ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿ ವರದಿಗಾರ ಹರೀಶ್ ಎಂಬುವವರು ಹಲ್ಲೆಗೆ ಒಳಗಾದವರನ್ನು ಮಾತನಾಡಿಸಲು ಉಜಿರೆಯ ಬೆನಕ ಆಸ್ಪತ್ರೆಗೆ ಹೋಗಿದ್ದಾಗ ಆ ಸಂದರ್ಭದಲ್ಲಿ ಗಿರೀಶ್ ಮಟ್ಟಣವರ್ ಬಳಿ ಬೈಟ್ ಕೊಡುವಂತೆ ಕೇಳಿದಾಗ ಅವರಿಗೆ ಬೈದಿದ್ದಾರೆ.
