ಉದಯವಾಹಿನಿ, ಚಿಕ್ಕೋಡಿ: ಕಳೆದ ಮಂಗಳವಾರ ಪಂಜಾಬಿನ ಪಟಿಯಾಲಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಕರ್ತವ್ಯ ನಿರತ ಯೋಧ ಕಿರಣರಾಜ್ ಕೇದಾರಿ ತೆಲಸಂಗ (23) ಅವರ ಅಂತ್ಯಕ್ರಿಯೆ ಸ್ವಗ್ರಾಮ ಅಥಣಿ ತಾಲೂಕಿನ‌ ಐಗಳಿ ಗ್ರಾಮದಲ್ಲಿ ಜರುಗಿತು. 15 ತಿಂಗಳ ಹಿಂದೆ ಸೇನೆ ಸೇರಿದ್ದ ಕಿರಣರಾಜ್ ತಮ್ಮ ಕರ್ತವ್ಯದಲ್ಲಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮಂಗಳವಾರ ಕೊನೆಯುಸಿರೆಳೆದಿದ್ದರು.
ಕಿರಣರಾಜ್ ಅವರ ಪಾರ್ಥಿವ ಶರೀರಕ್ಕೆ ಅಥಣಿ ಪಟ್ಟಣದ ತಹಸೀಲ್ದಾರ್‌ ಕಚೇರಿ, ಮಾಜಿ ಸೈನಿಕರ ಸಂಘದ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಮುಖ್ಯ ರಸ್ತೆಯ ಮೂಲಕ ಸಾವಿರಾರು ಸಂಖ್ಯೆಯ ಜನರ ಮಧ್ಯೆ ಮೆರವಣಿಗೆ ಮೂಲಕ ತರಲಾಯಿತು.
ಕಿರಣರಾಜ್ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಯೋಧನ ಕಳೆದುಕೊಂಡ ಕುಟುಂಬ ಅಲ್ಲದೆ ನೆರೆದ ಸಾವಿರಾರು ಜನ ಕಂಬನಿ ಮಿಡಿದು ಕಿರಣರಾಜ್ ಅಮರ ರಹೇ ಎಂದು ಘೋಷಣೆ ಕೂಗಿ ಅಭಿಮಾನ ತೋರಿದರು.

Leave a Reply

Your email address will not be published. Required fields are marked *

error: Content is protected !!