ಉದಯವಾಹಿನಿ, ಶಿವಮೊಗ್ಗ: ಕಾಂಗ್ರೆಸ್‍ಗೆ ಮತಗಳ್ಳತನದ ಹಿನ್ನೆಲೆ ಬಹಳ ಹಿಂದಿನಿಂದಲೂ ಇದೆ. ರಾಹುಲ್ ಗಾಂಧಿಯವರ ಅಜ್ಜಿಯೇ ಇದರಿಂದ ಗೆದ್ದಿದ್ದರು ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಮತಗಳ್ಳತನ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇಶದ ತುರ್ತು ಪರಿಸ್ಥಿತಿಗೂ ಮೊದಲೇ ಮತಗಳ್ಳತನ ನಡೆದಿದೆ. ರಾಯ್‍ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಗಾಂಧಿ ಮತಗಳ್ಳತನದಿಂದ ಗೆದ್ದಿದ್ದರು. ಈಗ ರಾಹುಲ್ ಅವರು ಪ್ರಚಾರಕ್ಕಾಗಿ ಮತಗಳ್ಳತನದ ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ ತಿರುಗೇಟುಕೊಟ್ಟಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಸದಸ್ಯತ್ವ ರದ್ದು ಮಾಡಿತ್ತು. ಆಗ ಅವರು ಸುಪ್ರೀಂ ಕೋರ್ಟ್‍ಗೆ ಹೋಗಿದ್ದರು. ಅಲಹಾಬಾದ್ ಕೋರ್ಟ್ ತೀರ್ಪನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಹೇಳಿದ್ರೂ ಅಧಿಕಾರದಿಂದ ಅವರು ಕೆಳಗೆ ಇಳಿಯಲಿಲ್ಲ. ತುರ್ತು ಪರಿಸ್ಥಿತಿ ಹೇರಿ ದಬ್ಬಾಳಿಕೆ ಮಾಡಿದ್ರು. ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್, ರಾಹುಲ್ ಇದನ್ನ ಅರ್ಥ ಮಾಡಿಕೊಳ್ಳಲಿ. 50 ವರ್ಷ ಆಗಿದೆ, ದೇಶದ ಜನರಿಗೂ ಮರೆತು ಹೋಗಿದೆ ಎಂದು ಅವರು ಭಾವಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋಕೆ ನಾಚಿಕೆ ಆಗಬೇಕು. ಚುನಾವಣೆ ಬಳಿಕ ತಕ್ಷಣ ಆಕ್ಷೇಪ ಸಲ್ಲಿಸಲು ಅವಕಾಶವಿತ್ತು. ಇವರ ಬಿಎಲ್‍ಎಗಳು ಮತಗಟ್ಟೆಗಳಲ್ಲಿ ಏನು ಮಾಡುತ್ತಿದ್ದರು..? ಮತಗಟ್ಟೆಗಳಲ್ಲಿ ಬಿಎಲ್‍ಎ ನೇಮಕಕ್ಕೆ ಚುನಾವಣಾ ಆಯೋಗ ಅವಕಾಶ ನೀಡಿತ್ತು ಆಗ ಯಾರು ತಕರಾರು ಮಾಡಿಲ್ಲ. ಚುನಾವಣೆ ಮುಗಿದ ಮೂರು ತಿಂಗಳವರೆಗೆ ತಕರಾರು ಸಲ್ಲಿಸಲು ಅವಕಾಶವಿತ್ತು. ಆಪಾದನೆ ನಂತರದಲ್ಲೂ ಚುನಾವಣಾ ಆಯೋಗ ಅಫಿಡವಿಟ್ ಸಲ್ಲಿಸಲು ಹೇಳಿದೆ. ಇವರು ಅಫಿಡವಿಟ್ ಸಲ್ಲಿಸಲು ಸಿದ್ಧರಿಲ್ಲ. ರಾಹುಲ್ ಹೇಳುವ ಮಾತುಗಳಲ್ಲಿ ಅವರಿಗೆ ನಂಬಿಕೆ ಇಲ್ಲ. ಜನರ ಕಿವಿಗೆ ಹೂ ಇಡುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!