ಉದಯವಾಹಿನಿ, ಬೆಳಗಾವಿ: ಕೂಡಲಸಂಗಮ ಅಭಿವೃದ್ಧಿ ಮಂಡಳಿ ಯೋಜನೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಶೀಘ್ರದಲ್ಲಿ ಬಾಕಿ ಉಳಿದಿರುವ ಮ್ಯೂಸಿಯಂ ಕೆಲಸವನ್ನೂ ಮುಗಿಸಿ ಜನರಿಗೆ ಸಮರ್ಪಣೆ ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯರಾದ ನಿರಾಣಿ ಹಣಮಂತ ರುದ್ರಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಮ್ಮ ಕೂಸು, ನಮ್ಮ ಮಹತ್ವಾಕಾಂಕ್ಷೆ ಯೋಜನೆ. ಈ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವುದು ನಿಜ. ಈಗಾಗಲೇ ಸಿವಿಲ್ ಕಟ್ಟಡ ಕಾಮಗಾರಿ ಕೆಲಗಳು ಮುಗಿದಿವೆ. ಇನ್ನೂ ಮ್ಯೂಸಿಯಂ ಕೆಲಸಗಳು ಮಾತ್ರ ಬಾಕಿ ಇದ್ದು, ಕ್ಷಿಪ್ರಗತಿಯಲ್ಲಿ ಆ ಕೆಲಸಗಳನ್ನೂ ಮುಗಿಸುವ ಬದ್ಧತೆ ನಮ್ಮ ಸರ್ಕಾರಕ್ಕೆ ಇದೆ ಎಂದು ಉತ್ತರಿಸಿದರು.
ಸಿದ್ದೇಶ್ವರ ಶ್ರೀಗಳು ತಜ್ಞರ ಸಮಿತಿ ರಚಿಸಿ ಮ್ಯೂಸಿಯಂ ಹೇಗಿರಬೇಕು ಎಂಬ ಕುರಿತು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳ ಅನ್ವಯ ಕಟ್ಟಡ ಕೆಲಸ ಮುಗಿದಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಇವತ್ತಿನ ಕಾಲಕ್ಕೆ ಬಸವಣ್ಣನ ಜೀವನ ಅರ್ಥ ಮಾಡಿಸುವ ಶೈಲಿಯಲ್ಲಿ ಮ್ಯೂಸಿಯಂ ಮಾಡುವ ಕೆಲಸ ಮಾತ್ರ ಬಾಕಿ ಇದೆ. ಬಸವಣ್ಣನ ಜೀವನ ದರ್ಶನ ಮ್ಯೂಸಿಯಂ ಗೆ ಹೆಚ್ಚುವರಿಯಾಗಿ 10.70 ಕೋಟಿ ರೂ. ಅಂದಾಜು ತಯಾರು ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಆ ಹಣವನ್ನೂ ಮಂಜೂರು ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
