ಉದಯವಾಹಿನಿ, ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ ನೆರವೇರಲಿದೆ. ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜೆಗೆ ಸಕಲ ಸಿದ್ಧತೆಗಳು ನಡೆದಿದ್ದು, ದೇವಾಲಯದ ಒಳಾಂಗಣಕ್ಕೆ ಕಬ್ಬು, ಎಳನೀರು, ಕಾಯಿ, ಹೂಗಳಿಂದ ಅಲಂಕಾರ ಮಾಡಲಾಗಿದೆ. ಚಾಮುಂಡೇಶ್ವರಿಗೆ ವಿಶೇಷ ಲಕ್ಷ್ಮೀ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜೆ ನೆರವೇರಲಿದೆ. ಇನ್ನು ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದ್ದು, ವಿಶೇಷ ದರ್ಶನ, ಧರ್ಮ ದರ್ಶನ ಸೇರಿ ವಿಐಪಿ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಕ್ತರು ಸರತಿ ಸಾಲಿನಲ್ಲಿ ನಿಂತು ಸಾಗಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅವ್ಯವಸ್ಥೆ ಆಗದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ, ಪುನಸ್ಕಾರ ನೆರವೇರಲಿದೆ. ನಾಳೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಲಲಿತ ಮಹಲ್ ಮುಂಭಾಗದ ಮೈದಾನದಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಕಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಚಾಮುಂಡಿಬೆಟ್ಟಕ್ಕೆ 30 ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಹಿಳೆಯರು ಬೆಟ್ಟಕ್ಕೆ ನಗರ ಬಸ್ ನಿಲ್ದಾಣದಿಂದ ತೆರಳಿದರೂ ಫ್ರೀ, ಲಲಿತ ಮಹಲ್ ಮುಂಭಾಗ ಮೈದಾನದಿಂದ ಹೊರಟರೂ ಫ್ರೀ. ಆದ್ರೆ, ಪುರುಷರು ಲಲಿತ ಮಹಲ್ನಿಂದ ಬೆಟ್ಟದವರೆಗೆ ಮಾತ್ರ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
