ಉದಯವಾಹಿನಿ, ಕೋಲಾರ: 3ನೇ ಹಂತದ ಕೆಸಿ ವ್ಯಾಲಿ ನೀರಿನ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜ್ ತಿಳಿಸಿದ್ದಾರೆ. ಅವರು ಜಿಲ್ಲೆಯ ಜೀವನಾಡಿ ಕೆರೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿಯಾದ ಕೆಸಿ ವ್ಯಾಲಿ ಯೋಜನೆಯನ್ನುವೀಕ್ಷಿಸಿದರು. ಲಕ್ಷ್ಮೀಸಾಗರ ಕೆರೆ ಬಳಿಯ ಕೆಸಿ ವ್ಯಾಲಿ ಯೋಜನೆಯ ಡಿಸಿ ಪಾಯಿಂಟ್ ಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ನರಸಾಪುರ ಕೆರೆ ಬಳಿಯ ಪಂಪ್ ಹೌಸ್ ಗೂ ಭೇಟಿ ನೀಡಿ ವೀಕ್ಷಣೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡೀ ಏಷ್ಯಾದಲ್ಲಿಯೇ ಕೆಸಿ ವ್ಯಾಲಿ ಯೋಜನೆ ಎಲ್ಲೂ ಆಗಿಲ್ಲ. ಇದು ತ್ಯಾಜ್ಯ ನೀರನ್ನು ಬಳಸಿಕೊಳ್ಳುವ ಉತ್ತಮ ಯೋಜನೆಯಾಗಿದೆ.
ಇಲ್ಲಿನ ರೈತರ ಸಮಸ್ಯೆಗಳ ಬಗ್ಗೆ ವಿಚಾರಿಸಿದ್ದೇನೆ. ಶಾಸಕರು, ಅಧಿಕಾರಿಗಳ ಜೊತೆಯೂ ಚರ್ಚೆ ನಡೆಸಿದ್ದೇನೆ. ರೈತರಿಗೆ ಎದುರಾಗುವ ತೊಂದರೆಗಳನ್ನು ನಿವಾರಣೆ ಮಾಡುತ್ತೇನೆ ಎಂದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಸಿ ವ್ಯಾಲಿ ಯೋಜನೆ ಪ್ರಾರಂಭಿಸಲಾಗಿದೆ. ಮೂರನೇ ಬಾರಿ ಶುದ್ಧೀಕರಿಸಿ ಕೆರೆಗಳಿಗೆ ನೀರು ಹರಿಸಬೇಕು ಎನ್ನುವ ಒತ್ತಾಯವಿದೆ. ಅಧಿಕಾರಿಗಳ ಜೊತೆ ಮಾತನಾಡಿ ಜನಾಭಿಪ್ರಾಯದಂತೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಎರಡನೇ ಹಂತದ ಕೆಸಿ ವ್ಯಾಲಿ ಯೋಜನೆಯ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಗುಣಮಟ್ಟದಿಂದ ಕಾಮಗಾರಿ ನಡೆಸಲು ಸೂಚಿಸಿದ್ದೇನೆ ಎಂದರು.
