ಉದಯವಾಹಿನಿ, ಬೆಂಗಳೂರು: ಈ ಬಾರಿ ರೈತರಿಗೆ ಸಿಹಿ ಸುದ್ದಿ ಕೊಡಲು ನಿರ್ಧಾರ ಮಾಡಿದ್ದೇವೆ. ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಮುಂದಾಗಿದ್ದು, 8 ಸಾವಿರ ಕೋಟಿ ರೂ. ರೈತರಿಗೆ ಸಿಗಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಮುಂದಾಗಿದ್ದೇವೆ. ಸುಮಾರು 7 ಲಕ್ಷ ರೈತರಿಂದ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ಅಡಿ ಖರೀದಿಗೆ ನಿರ್ಧಾರ ಮಾಡಲಾಗಿದೆ. ಈ ವರ್ಷ ರಾಗಿ 6 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧಾರ ಮಾಡಲಾಗಿದೆ. ಈ ಬಾರಿ ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಖರೀದಿಗೆ ನಿರ್ಧರಿಸಲಾಗಿದೆ. ಸೆಪ್ಟೆಂಬರ್‍ನಿಂದ ನೋಂದಣಿ ಪ್ರಾರಂಭ ಮಾಡುತ್ತೇವೆ. ಜನವರಿಯಿಂದ ಮಾರ್ಚ್ ವರೆಗೂ ಖರೀದಿ ಮಾಡ್ತೀವಿ. 4,886 ರೂ. ಪ್ರತಿ ಕ್ವಿಂಟಾಲ್‍ಗೆ ನೀಡಿ ಖರೀದಿಗೆ ನಿರ್ಧಾರ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 596 ರೂ.ಹೆಚ್ಚಳ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ನವಣೆ, ಸಾಮೆ, ಹಾಕರ ಮುಂತಾದ ಸಿರಿಧಾನ್ಯಗಳು ಖರೀದಿಗೆ ನಿರ್ಧಾರ ಮಾಡಲಾಗಿದೆ. ಎಂಎಸ್‍ಪಿ 4,886 ಜೊತೆಗೆ ಸರ್ಕಾರದಿಂದ 114 ರೂ. ಸೇರಿ 5,000 ರೂ. ಪ್ರತಿ ಕ್ವಿಂಟಾಲ್‍ಗೆ ನೀಡಿ ಖರೀದಿಸಲಾಗುತ್ತದೆ. ಒಟ್ಟಾರೆ 7 ಲಕ್ಷಕ್ಕೂ ಹೆಚ್ಚು ರೈತರಿಂದ 15 ಲಕ್ಷ ಮೆಟ್ರಿಕ್ ಟನ್ ಉತ್ಪನ್ನಗಳನ್ನ ಅಂದಾಜು 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿಗೆ ನಿರ್ಧಾರ ಮಾಡಲಾಗಿದೆ. ಯೋಜನೆಯ ಲಾಭವನ್ನು ಮಧ್ಯವರ್ತಿಗಳು ಪಡೆಯುವುದನ್ನ ತಡೆಯಲು ಕರ್ನಾಟಕ ರಿಮೋಟ್ ಸೆನ್ಸಿಂಗ್ ಏಜನ್ಸಿಯಿಂದ ಉಪಗ್ರಹ ಛಾಯಾಚಿತ್ರ ಪಡೆದು ಬೆಳೆ ಸಮೀಕ್ಷೆ ವರದಿಯೊಂದಿಗೆ ತಾಳೆ ಮಾಡಿ ನೈಜ ರೈತರಿಗೆ ಲಾಭ ತಲುಪಿಸಲು ಕ್ರಮಕೈಗೊಳ್ಳಲಾಗಿದೆ.
